ದೇಶದಲ್ಲಿ ಮೊದಲ ಸಹಕಾರಿ ಸಂಸ್ಥೆ ಸ್ಥಾಪಿಸಿದ ಹೆಗ್ಗಳಿಕೆ ಕರ್ನಾಟಕಕ್ಕಿದೆ: ಅಮಿತ್ ಶಾ

Update: 2022-12-30 17:15 GMT
ದೇಶದಲ್ಲಿ ಮೊದಲ ಸಹಕಾರಿ ಸಂಸ್ಥೆ ಸ್ಥಾಪಿಸಿದ ಹೆಗ್ಗಳಿಕೆ ಕರ್ನಾಟಕಕ್ಕಿದೆ: ಅಮಿತ್ ಶಾ
  • whatsapp icon

ಬೆಂಗಳೂರು, ಡಿ.30: ಭಾರತದಲ್ಲಿ ಸಹಕಾರಿ ಸಂಸ್ಥೆಯನ್ನು ಮೊಟ್ಟ ಮೊದಲು ಸ್ಥಾಪಿಸಿದ ಖ್ಯಾತಿ ಕರ್ನಾಟಕ ರಾಜ್ಯಕ್ಕಿದ್ದು, ಇದರ ಪರಿಣಾಮ ದೇಶದಲ್ಲಿ ಬರೋಬ್ಬರಿ 9 ಲಕ್ಷ ಯಶಸ್ವಿ ಕಾರ್ಪೊರೇಟೀವ್ ಸೊಸೈಟಿಗಳಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಮಿತ್ ಶಾ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಿ, ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಹಕಾರಿ ಆಂದೋಲನ ಸರಿಸುಮಾರು 100 ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ನಡೆಯತ್ತಿದೆ. ಗದಗದ ಸಿದ್ದನಗೌಡ ರಮಣ ಪಾಟೀಲ್, ದೇಶದಲ್ಲಿ ಮೊದಲ ಸಹಕಾರಿ ಸಂಘ ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲಿಂದ ಶುರುವಾಗಿರುವ ಸಹಕಾರಿ ಆಂದೋಲನ ಇಡೀ ಭಾರತದಲ್ಲಿ ವ್ಯಾಪಿಸಿದೆ. ಇಷ್ಟೇ ಅಲ್ಲ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ದಿನ ಮಂಡ್ಯದಲ್ಲಿ ಕರ್ನಾಟಕ ಕಾರ್ಪೊರೇಟೀವ್ ಪ್ಲಾಂಟ್ ಉದ್ಘಾಟನೆ ಮಾಡಿದ್ದೇನೆ. ಕರ್ನಾಟಕದ ಸಹಕಾರಿ ಆಂದೋಲನ ಕುರಿತು ಹೇಳಲು ಒಂದು ಉದಾಹರಣೆ ಕೊಡುತ್ತೇನೆ. ಅದು ನಂದಿನಿ. ಕರ್ನಾಟಕದಲ್ಲಿ ನಂದಿನ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಂದಿನಿಯಿಂದ ಹಳ್ಳಿ ಹಳ್ಳಿಯಲ್ಲಿರುವ ಮಹಿಳೆಯರು, ಕುಟುಂಬಗಳಿಗೆ ಎಲ್ಲ ರೀತಿಯಿಂದಲೂ ನೆರವಾಗುತ್ತಿದೆ ಎಂದು ತಿಳಿಸಿದರು.

ನಂದಿನಿಯಿಂದ ಲಕ್ಷಾಂತರ ಕುಟುಂಬಗಳು ಹಸನಾಗಿದೆ. ಅತೀ ದೊಡ್ಡ ವರ್ಗಕ್ಕೆ ಉತ್ಪಾದನೆ ಮಾಡುವುದು ಹಾಗೂ ಅತೀ ದೊಡ್ಡ ಸಂಖ್ಯೆಯಲ್ಲಿ ಉತ್ಪಾದಕರು ಸಹಕಾರ ನೀಡುವುದು ಕಾರ್ಪೊರೇಟೀವ್ ಸೊಸೈಟಿಯಲ್ಲಿ ಅತೀ ಮುಖ್ಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಹಕಾರಿ ಮಂತ್ರಾಲಯ ಮಾಡಿದರು. ಈ ಮೂಲಕ ಕಾರ್ಪೊರೇಟೀವ್ ಸೊಸೈಟಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರ ಜೀವನ ಸುಗಮವಾಗಿಸಲು ಮೋದಿ ಈ ಕ್ರಮ ಕೈಗೊಂಡರು. ಇಂದು ವಿಶ್ವದಲ್ಲಿ 30 ಲಕ್ಷ ಯಶ್ವಸ್ವಿ ಕಾರ್ಪರೇಟೀವ್ ಸೊಸೈಟಿ ಇದೆ. ಇದರಲ್ಲಿ 9 ಲಕ್ಷ ಕಾರ್ಪರೇಟೀವ್ ಸೊಸೈಟಿ ಭಾರತದಲ್ಲೇ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಶೇ.20 ರಷ್ಟು ಅಕ್ಕಿಯನ್ನು ಸಹಕಾರಿ ಕ್ಷೇತ್ರ ಖರೀದಿಸಲಿದೆ. ಶೇ.35 ರಷ್ಟು ರಸಗೊಬ್ಬರ ಸಹಕಾರಿ ಕ್ಷೇತ್ರದಲ್ಲಿ ವಿತರಣೆಯಾಗುತ್ತಿದೆ. ಸಾವಯವ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಕೆಲಸವಾಗುತ್ತಿದೆ. ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರೂ. ಸಾಲ ನೀಡುವ ಯೋಜನೆಯನ್ನು ಅಮಿತ್‍ಶಾ ಚಾಲನೆ ನೀಡಿದ್ದಾರೆ. ಇನ್ನು ಬಿಜೆಪಿ ಪ್ರಮುಖ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಡಿ.31ಕ್ಕೆ ಮಲ್ಲೇಶ್ವರದ ಸೌಹಾರ್ದ ಫೆಡರೇಶನ್‍ಗೆ ಭೇಟಿ ನೀಡಿ, ಸೌಹಾರ್ದ ಸಹಕಾರಿಗಳ ಸಭೆಯನ್ನು ಅಮಿತ್ ಶಾ ನಡೆಸಲಿದ್ದಾರೆ. ಆನಂತರ ಬಿಜೆಪಿ ಬೂತ್ ವಿಜಯ ಅಭಿಯಾನವನ್ನು ಉದ್ಘಾಟಿಸಿ, ಪಕ್ಷದ ನೂತನ ಕ್ರಿಯಾ ಯೋಜನೆಗಳ ಕುರಿತು ಅಮಿತ್ ಶಾ ಮಾರ್ಗದರ್ಶನ ನೀಡಲಿದ್ದಾರೆ.

Similar News