ಓ ಮೆಣಸೇ...
ಒಂದು ಇಂಚು ಭೂಮಿಗೂ ಮಹಾರಾಷ್ಟ್ರ ಸರಕಾರ ಹೋರಾಡಲಿದೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಓಹ್! ಎಲ್ಲಿದೆ ಸಾರ್ ಅಷ್ಟೊಂದು ವಿಷಮ ಸ್ಥಿತಿ? ಚೀನಾ ಗಡಿ ಪ್ರದೇಶದಲ್ಲೇ?
ಮೀಸಲಾತಿ ಕೊಟ್ಟಿರುವ ನಾವು(ಬಿಜೆಪಿ)ಸುಮ್ಮನೆ ಕುಳಿತಿದ್ದೇವೆ. ಏನೂ ಮಾಡದವರು ಇಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ - ಸಿ.ಟಿ.ರವಿ, ಶಾಸಕ
ಹೌದು, ಸ್ವಾತಂತ್ರ ತಂದುಕೊಟ್ಟದ್ದೂ ನೀವೇ ತಾನೇ? ಜನರಿಗೆಲ್ಲಿ ನೆನಪಿರುತ್ತದೆ?
ಭವಿಷ್ಯದ ದೃಷ್ಟಿಯಿಂದ ಬ್ಯಾಟರಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಲಾಗುವುದು - ಆನಂದ್ ಸಿಂಗ್, ಸಚಿವ
ಅಲ್ಲಲ್ಲಿ ಆಗಾಗ ಅದಕ್ಕಿಂತ ಹೆಚ್ಚು ಮಾರಕ ವಿಷ ಕಾರುವ ನಿಮ್ಮ ಪಾಳಯದ ಭಾಷಣಗಾರರ ವಿಲೇವಾರಿಗೆ ಏನಾದರೂ ಮಾಡುತ್ತೀರಾ?
ಕೋವಿಡ್‌ಗೆ ಸಂಬಂಧಿಸಿ ಸರಕಾರಿ ಆಸ್ಪತ್ರೆಗಳಲ್ಲಿ 50,817 ಹಾಸಿಗೆಗಳು ಲಭ್ಯ - ಡಾ.ಸುಧಾಕರ್, ಸಚಿವ
ಎಷ್ಟು ಮಂದಿಗೆ ಕೋವಿಡ್ ತಗಲುತ್ತದೆಂಬ ಬಗ್ಗೆ ಜ್ಯೋತಿಷಿಗಳು ಅಷ್ಟು ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದಾರೆಯೇ?
ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಭಾರತವು ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತವಾಗಬೇಕಿದೆ - ನರೇಂದ್ರ ಮೋದಿ, ಪ್ರಧಾನಿ
ಇಂದು ಕಂಡು ಬರುತ್ತಿರುವ ಪರಮ ಕುರುಡು ದೃಷ್ಟಿಕೋನಗಳನ್ನು ಹಾಗೆಯೇ ಉಳಿಸಿಕೊಳ್ಳೋಣವೇ?
ಮಹಾತ್ಮಾ ಗಾಂಧಿಯವರ ಕನಸನ್ನು ನನಸಾಗಿಸಿದವರು ಪ್ರಧಾನಿ ನರೇಂದ್ರ ಮೋದಿ - ನಳಿನ್ ಕುಮಾರ್ ಕಟೀಲು, ಸಂಸದ
ಮಹಾತ್ಮಾ ಗಾಂಧಿಯವರ ದುಃಸ್ವಪ್ನಗಳಿಗೆ ನಿಮ್ಮ ಮಾತು ಖಂಡಿತ ಅನ್ವಯಿಸುತ್ತದೆ.
ಬೇನಾಮಿ ಆಸ್ತಿ ಮಾಡಲು ನನ್ನಪ್ಪ ಏನೂ ಮುಖ್ಯಮಂತ್ರಿ ಆಗಿರಲಿಲ್ಲ - ಸಿ.ಟಿ.ರವಿ, ಶಾಸಕ
ನಿಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾದವರಿಂದ ಲಾಭವಾಗುವುದು ಯಾರಿಗೆ ಎಂಬುದಂತೂ ಸ್ಪಷ್ಟವಾಯಿತು. ಅಂದಹಾಗೆ ನೀವು ವಿಷ ಕಾರುತ್ತಿರುವುದು ಬೊಮ್ಮಾಯಿ ಕುಟುಂಬದ ವಿರುದ್ಧ ಅಲ್ಲ ತಾನೇ?
ಭಾರತದಲ್ಲಿ ಕೋವಿಡ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಬಡವರು ಮಾತ್ರ ಸಾಯುತ್ತಾರೆ ಎಂಬ ನಂಬಿಕೆಯೇ?
ಗಾಂಧೀಜಿಯನ್ನು ಕೊಂದವರಿಗಾಗಿ ದೇವಸ್ಥಾನ ಕಟ್ಟುವವರನ್ನು 'ಭಯೋತ್ಪಾದಕ'ರೆಂದು ಗುರುತಿಸಿ ಕ್ರಮ ಜರುಗಿಸಬೇಕು - ಯು.ಟಿ.ಖಾದರ್, ಶಾಸಕ
ಆನಂತರದ 75 ವರ್ಷಗಳಲ್ಲಿ ಗೋಡ್ಸೆವಾದಿಗಳು ನಡೆಸಿದ ನೂರಾರು ಭಯೋತ್ಪಾದನಾ ಕೃತ್ಯಗಳ ಬಗ್ಗೆ ಏನಾದರೂ ಕ್ರಮದ ಅಗತ್ಯವಿದೆಯೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅತೀಂದ್ರಿಯ ಶಕ್ತಿ' ಹೊಂದಿದ್ದಾರೆ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ
ಇಂತಹ ವೌಢ್ಯವನ್ನು ನೀವು ನಂಬಿದ್ದರೆ ತಾನೇ ಇತರರು ನಂಬುವುದು?
ಭಾರತದ ಇತಿಹಾಸವನ್ನು 'ಸರಿಪಡಿಸಿದ' ರೂಪದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ವರ್ತಮಾನವನ್ನು ನಾಶ ಮಾಡುತ್ತಿರುವವರ ನೆಚ್ಚಿನ ಕಾಯಕ, ಇತಿಹಾಸ ಮಾತು ಭವಿಷ್ಯವನ್ನೂ ಕುಲಗೆಡಿಸುವುದು.
ಒಕ್ಕಲಿಗರು ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಅವರು ಭಿಕ್ಷುಕರೇನಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಜಕ್ಕೂ ಸ್ವಾಭಿನಿಯಾಗಿರುವವರು ಸದ್ಯ ಲಭ್ಯವಿರುವ ಸೀಮಿತ ಮೀಸಲಾತಿಯನ್ನು ಚಿಂದಿ ಚಿಂದಿಯಾಗಿಸಿ ಹಂಚುವ ಬದಲು, ಆನುಪಾತಿಕ ಮೀಸಲಾತಿ, ಖಾಸಗಿ ಕ್ಷೇತ್ರದ ಮೀಸಲಾತಿ ಇತ್ಯಾದಿಗಾಗಿ ಹೋರಾಡುತ್ತಾರೆ.
ಕೋವಿಡ್ ನಿಯಮ ಉಲ್ಲಂಸಿದರೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ - ಆರ್.ಅಶೋಕ್, ಸಚಿವ
ಕೆಲವು ಲಕ್ಷ ಮಂದಿ ಸಾಯುವ ತನಕ ಉಗ್ರ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಭವ್ಯ ಸಂಪ್ರದಾಯಕ್ಕೆ ಒಗ್ಗುವುದಿಲ್ಲ.
ಯಡಿಯೂರಪ್ಪ ಇಂದಿಗೂ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ - ಡಿ.ವಿ.ಸದಾನಂದಗೌಡ, ಸಂಸದ
ಸರ್ವಾಧಿಕಾರಿ ಪಕ್ಷಗಳಲ್ಲಿ ಪ್ರಶ್ನಾತೀತ ನಾಯಕರೇ ನೈಜ ನಾಯಕರಾಗಿರುತ್ತಾರೆ.
ಕಾಂಗ್ರೆಸ್‌ನವರು ಹಿಂದಿನಿಂದಲೂ ತುಷ್ಟೀಕರಣ ರಾಜಕಾರಣ ಮಾಡುತ್ತಾ ಮುಸ್ಲಿಮರನ್ನು ದಿಕ್ಕು ತಪ್ಪಿಸುತ್ತಲೇ ಬಂದಿದ್ದಾರೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಇತರೆಲ್ಲ ಭಾರತೀಯರನ್ನು ದಿಕ್ಕು ತಪ್ಪಿಸುವ ಹೊಣೆಯನ್ನು ನಿಮ್ಮ ಪಕ್ಷ ವಹಿಸಿಕೊಂಡಂತಿದೆ.
ಯೂಸ್ ಆ್ಯಂಡ್ ತ್ರೋ ಮಾಡುವವರು ಇದ್ದರೆ ಅದು ಬಿಜೆಪಿಯವರು ಎನ್ನುವುದಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರೇ ಉದಾಹರಣೆ - ಶಿವರಾಜ್ ತಂಗಡಗಿ, ಮಾಜಿ ಸಚಿವ
ದೇಶ ಮತ್ತು ಜನತೆಗೆ ಒದಗಿದ ಗತಿ ನಿಮಗೆ ಉದಾಹರಣೆಯಾಗಿ ಕಾಣುತ್ತಿಲ್ಲವೇ?
ಭಾರತೀಯ ನಾರಿ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು ಎಂಬುದನ್ನು ನಾನು ತೋರಿಸಿಕೊಟ್ಟಿದ್ದೇನೆ - ಸ್ಮತಿ ಇರಾನಿ, ಕೇಂದ್ರ ಸಚಿವೆ
ಸುಳ್ಳು ಹೇಳಿ ಜನರನ್ನು ವಂಚಿಸುವ ವಿಷಯದಲ್ಲಿ ನಿಮ್ಮ ಮಟ್ಟದ ಪ್ರತಿಭೆ ಬೇರಾವುದೇ ಭಾರತೀಯ ನಾರಿಯಲ್ಲಿ ಇತ್ತೀಚೆಗಂತೂ ಕಂಡುಬಂದಿಲ್ಲ.
ಬಿಜೆಪಿ ಯಡಿಯೂರಪ್ಪರಿಗೆ ಎಲ್ಲವನ್ನೂ ನೀಡಿದ್ದು, ಅವರನ್ನು ನಿರ್ಲಕ್ಷಿಸಿಲ್ಲ - ಬಿ.ವೈ.ರಾಘವೇಂದ್ರ, ಸಂಸದ
ಮಗನಿಗೆ ಏನು ಕೊಟ್ಟಿಲ್ಲ ಎನ್ನುವುದು ಸದ್ಯಕ್ಕೆ ಯಡಿಯೂರಪ್ಪರ ತಕರಾರು.
ರಶ್ಯವನ್ನು ಹರಿದು ಹಾಕಲು ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸುತ್ತಿವೆ - ವ್ಲಾದಿಮಿರ್ ಪುಟಿನ್, ರಶ್ಯ ಅಧ್ಯಕ್ಷ
ಅದಕ್ಕೆ ನೀವೇ ಸಾಕಾಗುವುದಿಲ್ಲವೇ?
ಮಕ್ಕಳ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು ಪ್ರತೀ ಜಿಲ್ಲೆಗೆ ಒಂದರಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ - ಆರಗ ಜ್ಞಾನೇಂದ್ರ, ಸಚಿವ
ನ್ಯಾಯಾಲಯದೊಳಗೆ ನ್ಯಾಯವೂ ಸಿಗುವಂತಿರಲಿ.
ಯಡಿಯೂರಪ್ಪರ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ - ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ಐಟಿ, ಈಡಿ ಅಧಿಕಾರಿಗಳು ಇರುವುದೇ ಆ ಶಕ್ತಿಯನ್ನು ಕಿತ್ತು-ಕೊಲ್ಲುವುದಕ್ಕೆ.
ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿರುವುದರಿಂದ ಅವರಿಗೆ ನಷ್ಟವೇ ಹೊರತು ಬಿಜೆಪಿಗಲ್ಲ - ರೇಣುಕಾಚಾರ್ಯ, ಶಾಸಕ
ಇರಲಿ ಬಿಡಿ. ಅಗತ್ಯ ಬಿದ್ದಾಗ ಪಕ್ಷಾಂತರ ಮಾಡುವುದಕ್ಕೆ ಬೇಕಾಗುತ್ತದೆ.
ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸೀತೆಯನ್ನು ರಾಮನಿಂದ ಬೇರ್ಪಡಿಸಿದ್ದಾರೆ. ಅದಕ್ಕಾಗಿ ನಾವು 'ಜೈಸೀತಾರಾಮ್' ಎಂದು ಹೇಳುತ್ತೇವೆ - ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಮೊದಲು ಬೇರ್ಪಡಿಸಿರುವ ಸೀತೆಯನ್ನು ಹುಡುಕಿ ತರುವ ಜವಾಬ್ದಾರಿ ಹೊತ್ತು ಕೊಳ್ಳಿ.
ಅಂಗನವಾಡಿಗಳಿಂದಲೇ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಶಿಕ್ಷಕಿಯರು, ಸಹಾಯಕಿಯರಿಗೆ ಶೈಕ್ಷಣಿಕ ಮಾನದಂಡ ನಿಗದಿಗೊಳಿಸಲಾಗಿದೆ - ಹಾಲಪ್ಪ ಆಚಾರ್, ಸಚಿವ
ಮಾನವಿಲ್ಲದವರು ವಿಧಿಸುವ ಮಾನದಂಡ ಬರೇ ದಂಡ.
ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ
ಅದಕ್ಕಾಗಿ ಚೀನಾದ ಬೆಂಬಲ ಕೇಳುವ ಉದ್ದೇಶ ಇದೆಯೇ ?