ಅಡಿಕೆ ಮಾನ ಕಾಪಾಡದ ಬಿಜೆಪಿ; ತೀರ್ಥಹಳ್ಳಿ ಮತದಾರನ ತೀರ್ಮಾನವೇನಿದ್ದೀತು?
ಅಡಿಕೆ ಮಾನ ಕಾಪಾಡದ ಬಿಜೆಪಿಗೆ ಪಾಠ ಕಲಿಸಲಿದ್ದಾರೆಯೆ ಜನರು? ಆರಗ ವಿರುದ್ಧ ಪಕ್ಷದೊಳಗೇ ಇರುವ ಮುನಿಸಿನ ಪರಿಣಾಮವೇನಾದೀತು? ಕಾಂಗ್ರೆಸ್ - ಜೆಡಿಎಸ್ ನಡುವಿನ ಒಕ್ಕಲಿಗ ಹಣಾಹಣಿಯ ಲಾಭ ಯಾರಿಗೆ? ತೀರ್ಥಹಳ್ಳಿ ಅಸೆಂಬ್ಲಿ ಕ್ಷೇತ್ರದಲ್ಲಿ ಹೇಗಿರಲಿವೆ ಕಡೇ ಕ್ಷಣದ ರಣತಂತ್ರಗಳು?
ಪ್ರಜ್ಞಾವಂತರ-ಪ್ರತಿಭಾವಂತರ ಕ್ಷೇತ್ರ ತೀರ್ಥಹಳ್ಳಿ, ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಜನ್ಮಭೂಮಿ. ಸಮಾಜವಾದಿ, ಗಾಂಧಿವಾದಿಗಳನ್ನು ಕಂಡ ಕರ್ಮಭೂಮಿಯಲ್ಲಿ ಕಳೆದೆರಡು ಚುನಾವಣೆಗಳಿಂದ ಧರ್ಮ ದಂಗಲ್, ಅಸಹಿಷ್ಣುತೆ ರಾಜಕಾರಣದ್ದೇ ಛಾಯೆ. ಅಭಿವೃದ್ಧಿ ಅಜೆಂಡಾಗಳು ಚುನಾವಣಾ ವಿಚಾರವಾಗದೆ ಕೋಮುದಳ್ಳುರಿ ವಿಚಾರಗಳೇ ತೀರ್ಥಹಳ್ಳಿ ವಿಧಾನಸಭಾ ಚುನಾವಣೆಯ ವಿಷಯಗಳಾಗುತ್ತಿರುವುದನ್ನು ಎಲ್ಲರೂ ಕಂಡಿದ್ದಾರೆ.
ಒಕ್ಕಲಿಗರ ಪ್ರಾಬಲ್ಯದ ತೀರ್ಥಹಳ್ಳಿಯಲ್ಲಿ ಈಡಿಗರು, ಬ್ರಾಹ್ಮಣರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದ ಗಡಿಯಲ್ಲಿರುವು ದರಿಂದ ತೀರ್ಥಹಳ್ಳಿಯೊಳಗೆ ಅನೈತಿಕ ಪೊಲೀಸ್ ಗಿರಿ ಹಾಗೂ ಸ್ವಯಂ ಘೋಷಿತ ಗೋ ರಕ್ಷಕರ ಹೆಚ್ಚಳ ಈಚಿನ ವರ್ಷಗಳಲ್ಲಿ ಕಾಣಿಸಿದೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ದೊಡ್ಡ ಕ್ಷೇತ್ರಗಳಲ್ಲಿ ಒಂದು. ಸಂಪೂರ್ಣ ತೀರ್ಥಹಳ್ಳಿ ತಾಲೂಕು, ಹೊಸನಗರ ತಾಲೂಕಿನ ಹುಂಚ ಹಾಗೂ ನಗರ ಹೋಬಳಿ ಮತ್ತು ಶಿವಮೊಗ್ಗದ ನಿದಿಗೆ-2ನೇ ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಜನಪರವಾಗಿರುವ ನಾಯಕರನ್ನು ಹಲವು ಬಾರಿಗೆ ಆರಿಸಿರುವ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ರೈತ ಹೋರಾಟಗಾರ ಕಡಿದಾಳ್ ಮಂಜಪ್ಪ, ಸಮಾಜವಾದಿ ಮತ್ತು ಗೇಣಿ ರೈತ ಚಳವಳಿಗಾರ ಶಾಂತವೇರಿ ಗೋಪಾಲ ಗೌಡ ಮತ್ತು ಕೋಣಂದೂರು ಲಿಂಗಪ್ಪರಂಥವರನ್ನು ಗೆಲ್ಲಿಸಿದೆ. ಆದರೆ ಧರ್ಮ ರಾಜಕಾರಣದ ಸೋಂಕಿಗೆ ಒಳಗಾದ ತೀರ್ಥಹಳ್ಳಿ ಕ್ಷೇತ್ರ ಈಗ ಸಮಾಜವಾದಿ-ಗಾಂಧಿವಾದಿ ತತ್ವಾದರ್ಶಕ್ಕೆ ತದ್ವಿರುದ್ಧವಾದ ಧರ್ಮ ರಾಜಕಾರಣದ ಸುಪರ್ದಿಗೆ ಒಳಪಟ್ಟಿದೆ ಎಂಬ ಕಳವಳವೂ ಹಲವರದ್ದು.
ಒಂದು ಕಾಲದಲ್ಲಿ ಸಮಾಜವಾದಿ ನಾಯಕರ ನೆಲೆಯಾಗಿದ್ದ, ಅಖಾಡವಾಗಿದ್ದ ತೀರ್ಥಹಳ್ಳಿ ಕಳೆದ ಬಾರಿ ಕೇಸರಿ ಕಡೆ ವಾಲಿದೆ. ಈಗ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ 1983ರಿಂದ ನಿರಂತರವಾಗಿ ಮೂರು ಬಾರಿ ಬಿಜೆಪಿ ಉಮೇದುದಾರನಾಗಿ ಅಖಾಡಕ್ಕಿಳಿದು ಹೀನಾಯವಾಗಿ ಸೋಲನುಭವಿಸಿದ್ದವರು. 1994ರಲ್ಲಿ ಶಾಸಕರಾದರು. ಜನತಾ ದಳದ ಚಂದ್ರೇಗೌಡ, ಬಿಜೆಪಿಯ ಆರಗ ಮತ್ತು ಕಾಂಗ್ರೆಸ್ ಮಧ್ಯೆ ನಡೆದ ಹಣಾಹಣಿಯಲ್ಲಿ ಚಂದ್ರೇಗೌಡರನ್ನು ಆರಗ ಜ್ಞಾನೇಂದ್ರ 2,952 ಮತಗಳಿಂದ ಸೋಲಿಸಿದರು. 1999ರ ಚುನಾವಣೆ ಬಿಜೆಪಿಯ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ನಡುವೆ ಭಾರೀ ಪೈಪೋಟಿ ನಡೆದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಆರಗ 4,102 ಮತಗಳಿಂದ ಗೆದ್ದರು. 2004ರಲ್ಲಿ ಬಿಜೆಪಿಯ ಜ್ಞಾನೇಂದ್ರ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್ ವಿರುದ್ಧ ಪ್ರಯಾಸದ ಗೆಲುವು ಕಂಡರು. ಕ್ಲೀನ್ ಇಮೇಜ್ ಹೊಂದಿದ್ದ ಕಿಮ್ಮನೆ ಗೆಲುವಿನ ಬಾಗಿಲಿಗೆ ಬಂದು, 1,366 ಮತಗಳ ಸಣ್ಣ ಅಂತರದಿಂದ ಸೋತರು.
ಸರಳ, ಸಜ್ಜನ-ಜಾತ್ಯತೀತ ಮತ್ತು ಕ್ಷೇತ್ರದ ಬೇಕು-ಬೇಡದ ಅರಿವು ಹೊಂದಿರುವ ಅಭ್ಯರ್ಥಿ ಎಂಬ ಇಮೇಜ್ ಹೊಂದಿರುವ ಕಿಮ್ಮನೆ 2008ರ ಚುನಾವಣೆಯಲ್ಲಿ 57,930 ಮತಗಳನ್ನು ಪಡೆದು ಬಿಜೆಪಿಯ ಆರಗ ಜ್ಞಾನೇಂದ್ರರನ್ನು (54,1063) ಪರಾಭವಗೊಳಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಿಮ್ಮನೆ, ಬಿಜೆಪಿಯಿಂದ ಆರಗ ಮತ್ತು ಯಡಿಯೂರಪ್ಪರ ಕೆಜೆಪಿಯಿಂದ ಮಂಜುನಾಥ ಗೌಡರ ನಡುವೆ ತೀಕ್ರೋನ ಸ್ಪರ್ಧೆ ನಡೆಯಿತು. ಕಿಮ್ಮನೆ (37,160) ಪ್ರತಿಸ್ಪರ್ಧಿ ಮಂಜುನಾಥ ಗೌಡರನ್ನು (35,817) ಸೋಲಿಸಿ ಎರಡನೇ ಬಾರಿ ಶಾಸಕರಾದರೆ, ಬಿಜೆಪಿಯ ಆರಗ ಮೂರನೇ ಸ್ಥಾನಕ್ಕೆ ತಲುಪಿದ್ದರು.
2018ರ ಚುನಾವಣೆಯ ಆಸು-ಪಾಸು. ವಿದ್ಯಾರ್ಥಿನಿ ನಂದಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಕೋಮು ದಳ್ಳುರಿಯಿಂದ ಹೊತ್ತಿ ಉರಿಯಿತು. ನಂದಿತಾ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೊಂದು ಕೋಮಿನ ಯುವಕರು ಕಾರಣವೆಂದು ಬಿಂಬಿಸಲಾಯಿತು. ಆರೋಪಿಗಳಿಗೆ ಕಿಮ್ಮನೆ ರತ್ನಾಕರ್ ರಕ್ಷಣೆ ನೀಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಿ ಬಿಜೆಪಿ ರಾಜಕೀಯ ಲಾಭ ಪಡೆದುಕೊಂಡಿತು ಎಂದೇ ಹೇಳಲಾಗುತ್ತದೆ. ಇನ್ನೊಂದೆಡೆ ಆ ಚುನಾವಣೆಯಲ್ಲಿ ಜೆಡಿಎಸ್‌ನ ಮಂಜುನಾಥ ಗೌಡ ಕಾಂಗ್ರೆಸ್ ಮತ ಬುಟ್ಟಿಗೆ ಕೈಹಾಕಿ 40,127 ಮತ ಪಡೆದದ್ದು ಕಿಮ್ಮನೆಗೆ ದೊಡ್ಡ ಅಂತರದ ಸೋಲಾಗಲು ಕಾರಣ ಎನ್ನಲಾಗುತ್ತದೆ.
ಮರೆಯಾಗುತ್ತಿದೆ ಅಭಿವೃದ್ಧಿ
ಬಹಳ ವಿಸ್ತಾರವಾಗಿರುವ ತೀರ್ಥಹಳ್ಳಿಯಲ್ಲಿ ಅಭಿವೃದ್ಧಿ ಅಷ್ಟಕ್ಕಷ್ಟೇ ಎನ್ನುವುದು ಪ್ರತಿಪಕ್ಷಗಳ ಆರೋಪ. ತೀರ್ಥಹಳ್ಳಿಯಲ್ಲಿ ಅಭಿವೃದ್ಧಿ ಮಾಯವಾಗಿ ಧರ್ಮ ರಾಜಕಾರಣ ನಡೆಯುತ್ತಿದೆ. ನೈತಿಕ ಪೊಲೀಸ್ ಗಿರಿ ಹೆಚ್ಚಾಗಿದೆ. ರೈತರ ಕಷ್ಟ ಕಾರ್ಪಣ್ಯ ಕೇಳುವವರಿಲ್ಲ, ಇಲ್ಲಿಗೆ ಹೊಸ ಉದ್ಯಮ- ಯೋಜನೆಗಳು ಬಂದಿಲ್ಲ. ತಾಲೂಕಿನ ಅಭಿವೃದ್ಧಿಗೆ ಹಾಲಿ ಗೃಹ ಮಂತ್ರಿಯವರ ಕೊಡುಗೆ ಶೂನ್ಯ ಎಂಬ ಆಪಾದನೆ ಪ್ರತಿಪಕ್ಷದವರದ್ದು. ದ್ವೇಷದ ಮತ್ತು ಮತೀಯ ರಾಜಕಾರಣಕ್ಕೆ ಪೊಲೀಸರನ್ನು ಬಳಸಿಕೊಂಡು ಮುಸ್ಲಿಮ್ ಸಮುದಾಯದ ಹುಡುಗರ ಭವಿಷ್ಯವನ್ನೇ ನಾಶ ಮಾಡುವಂಥ ಕ್ರಿಮಿನಲ್ ಕೇಸುಗಳನ್ನು ಹಾಕಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಗೃಹಮಂತ್ರಿಯಾಗಿದ್ದುಕೊಂಡೇ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಹೇಳಿಕೆ ನೀಡಿ ಮುಜುಗರಕ್ಕೀಡಾಗಿದ್ದ ಜ್ಞಾನೇಂದ್ರ, ಮೈಸೂರಲ್ಲಿ ಅತ್ಯಾಚಾರವಾದಾಗ ಆ ವಿದ್ಯಾರ್ಥಿನಿ ಸಂಜೆ ಮನೆಯಿಂದ ಹೊರಹೋದದ್ದೇ ತಪ್ಪೆಂದಿದ್ದು ಸರಕಾರದ ಇಮೇಜ್‌ಗೆ ಧಕ್ಕೆ ತಂದಿತು. ಅಷ್ಟೇ ಅಲ್ಲದೆ ಪಿಎಸ್‌ಐ ನೇಮಕಾತಿ ಹಗರಣ, ಹಿಜಾಬ್ ಪ್ರಕರಣ, ಮುಂತಾದ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾದಾಗಿನ ಜ್ಞಾನೇಂದ್ರ ನಡೆ ಕೂಡ ತೀವ್ರ ಟೀಕೆಗೆ ಒಳಗಾಯಿತು.
ಕಿಮ್ಮನೆ ರತ್ನಾಕರ್ ಶಾಸಕ ರಾಗಿದ್ದಾಗ ಮಂಜೂರಿ ಮಾಡಿಸಿಕೊಂಡು ಬಂದಿದ್ದ ಕಾಮಗಾರಿಗಳನ್ನೇ ಮುಂದು ವರಿಸಿ, ಕಿಲೋ ಮೀಟರಿಗೊಂದು ಪ್ಲೆಕ್ಸ್-ಬ್ಯಾನರ್ ಹಾಕಿಸಿ ತಮ್ಮದೇ ಸಾಧನೆಯೆಂದು ಪ್ರಚಾರ ಪಡೆದಿದ್ದಾರೆ ಎಂದೂ ಪ್ರತಿಪಕ್ಷಗಳು ಟೀಕಿಸಿವೆ. ತೀರ್ಥಹಳ್ಳಿಯಲ್ಲಿರುವ ರೈತರಲ್ಲಿ ಶೇ.60ರಷ್ಟು ಬಗರ್ ಹುಕುಂ ಸಾಗುವಳಿದಾರರು. ಸರಕಾರಿ ಜಾಗದಲ್ಲಿ ಸೂರು ಕಟ್ಟಿಕೊಂಡಿರುವವರಿಗೆ 94ಸಿ ನಿಯಮದಂತೆ ಪಟ್ಟಾ ಹಂಚಿಕೆಯೂ ಆಗುತ್ತಿಲ್ಲ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಇದ್ದಾರೆ. ಅವರಿಗೆ ಹಕ್ಕುಪತ್ರವಿಲ್ಲ ಇದು ತಾಲೂಕಿನ ಬಹುದೊಡ್ಡ ಸಮಸ್ಯೆಯಾದರೂ ಶಾಸಕರು ಪರಿಹರಿಸಲು ಮುಂದಾಗುತ್ತಿಲ್ಲ ಎಂಬುದು ಬಗರ್‌ಹುಕುಂ ರೈತರ ಆರೋಪವಾಗಿದೆ.
ಆರಗ ಬಗ್ಗೆ ಪಕ್ಷದೊಳಗೂ ಅಸಮಾಧಾನವಿದೆ ಎನ್ನಲಾಗುತ್ತಿದೆ. ಬಿಜೆಪಿ-ಸಂಘದ ದೊಡ್ಡವರ ಕೃಪಾಶೀರ್ವಾದವಿದ್ದರೂ ಸ್ಥಳೀಯ ಬಿಜೆಪಿಯ ಒಂದು ವರ್ಗ ವಿರುದ್ಧವಾಗಿದೆ ಎಂಬ ಮಾತು ತೀರ್ಥಹಳ್ಳಿಯಲ್ಲಿ ಕೇಳಿಬರುತ್ತಿದೆ. ಸತತ 9 ಬಾರಿ ಜ್ಞಾನೇಂದ್ರರಿಗೆ ಟಿಕೆಟ್ ಕೊಡಲಾಗಿದೆ. ಈಗವರಿಗೆ 70 ಆಗಿದೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಿ ಎಂಬ ಒತ್ತಾಯ ಕೇಳಿಬರುತ್ತಿದೆ ಎನ್ನಲಾಗುತ್ತಿದ್ದು, ಈಡಿಗ ಸಮುದಾಯ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದೆ. ಈಡಿಗ ಸಮುದಾಯದ ಬೇಗುವಳ್ಳಿ ಸತೀಶ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಜ್ಞಾನೇಂದ್ರರಿಗೆ ಕೊನೆಯ ಅವಕಾಶ ಕೊಡಲು ಸಂಘ ಪರಿವಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ತೀರ್ಥಹಳ್ಳಿಗೆ ಸೀಮಿತಗೊಳಿಸಿಕೊಂಡು ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕಿಮ್ಮನೆ ವರ್ಸಸ್ ಆರ್.ಎಂ.ಎಂ.
ಸಿದ್ದರಾಮಯ್ಯ ಬಣದ ಕಿಮ್ಮನೆ ಟಿಕೆಟ್ ಭರವಸೆಯಿಂದ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆರ್.ಎಂ.ಮಂಜುನಾಥ ಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕ್ಯಾಂಪಿನಲ್ಲಿ ಗುರುತಿಸಿಕೊಂಡವರು. ಟಿಕೆಟ್‌ಗಾಗಿ ಭಾರೀ ಪ್ರಯತ್ನ ನಡೆಸಿದ್ದಾರೆನ್ನಲಾಗುತ್ತಿದೆ. ಈ ಇಬ್ಬರ ಮುಸುಕಿನ ಗುದ್ದಾಟ, ಬಣ ರಾಜಕಾರಣ ಮಾಡಿದ್ದೇ ಆದಲ್ಲಿ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.
ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರಗತಿಪರ ರೈತ ಹಾಗೂ ಯುವ ಒಕ್ಕಲಿಗ ಮುಖಂಡ ರಾಜಾರಾಮ್ ಯಡೂರ್ ಅವರನ್ನು ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆಡಿಎಸ್ ಪಕ್ಷ ಉಳಿಸಲು ಕುಮಾರಸ್ವಾಮಿ ರಣತಂತ್ರ ಹೆಣೆದಿದ್ದು, ಈ ಬಾರಿಯ ಚುನಾವಣೆ ಒಕ್ಕಲಿಗರ ನಡುವೆ ನಡೆಯಲಿದ್ದು, ಜೆಡಿಎಸ್ ಅಭ್ಯರ್ಥಿ ಒಕ್ಕಲಿಗರಾಗಿರುವುದರಿಂದ ಯಾವ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ನೇಪಥ್ಯಕ್ಕೆ ಸರಿದ ಆಶ್ವಾಸನೆ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲು 500 ಕೋಟಿ ರೂ. ನೀಡುವುದಾಗಿ ಅಮಿತ್ ಶಾ ಘೋಷಿಸಿದ್ದರು. ಈಗ ನಾಲ್ಕು ವರ್ಷಗಳಾಗಿವೆ. ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಆಗಿಯೇ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಮೂಗಿಗೆ ತುಪ್ಪ ಸವರಿ ಮತ ಪಡೆದುಕೊಂಡಿದ್ದೇ ಬಿಜೆಪಿಗೆ ಲಾಭವಾಯಿತು ಎಂದರೆ ತಪ್ಪಾಗಲಾರದು.
ಬಿಜೆಪಿ ಕೊಟ್ಟ ಮಾತಿಗೆ ನಡೆದುಕೊಂಡಿಲ್ಲ ಎಂಬುದು ಈ ಬಾರಿ ಬಿಜೆಪಿಗೆ ಹೊಡೆತ ಕೊಟ್ಟರೂ ಅಚ್ಚರಿ ಇಲ್ಲ.
ಇದೆಲ್ಲದರ ನಡುವೆಯೇ, ಚುನಾವಣೆ ಹತ್ತಿರ ಬಂದಾಗ ಕೋಮು ಧ್ರುವೀಕರಣ ಸಾಧಿಸಿ ಗೆಲ್ಲಲು ಪ್ರಯತ್ನಿಸುವ ಆತಂಕವೂ ಇದೆ.