ಬೆಂಗಳೂರಿನ 80 ಹೋಟೆಲ್‍ಗಳಲ್ಲಿ ಸಿರಿಧಾನ್ಯ ಪೂರೈಕೆ: ಸಚಿವ ಬಿ.ಸಿ.ಪಾಟೀಲ್
ಬೆಂಗಳೂರು, ಜ.20: ರಾಜ್ಯ ಸರಕಾರ ಸಿರಿಧಾನ್ಯ ರೈತರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಸದ್ಯ ಬೆಂಗಳೂರಿನ 80 ಹೋಟೆಲ್‍ಗಳಲ್ಲಿ ಅತಿಹೆಚ್ಚು ಸಿರಿಧಾನ್ಯ ಪೂರೈಕೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು, ಒಂದು ಕಾಲದಲ್ಲಿ ಆಹಾರ ಭದ್ರತೆ ಕಡೆಗೆ ಗಮನಕೊಡುತ್ತಿದ್ದೆವು. ಆದರೆ, ಈಗ ಪೌಷ್ಠಿಕಾಂಶದ ಬಗ್ಗೆ ಗಮನ ಹರಿಸಲಾಗುತ್ತಿದೆ. ಕೇಂದ್ರ ಸೇರಿದಂತೆ ರಾಜ್ಯ ಸರಕಾರ ಜನರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ ಎಂದರು.
ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವೆಂದಾಗಿತ್ತು. ಈಗ ಸಿರಿಧಾನ್ಯ ಸಿರಿವಂತರ ಆಹಾರವಾಗಿದೆ. ಆದುದರಿಂದ ಮೇಳಗಳನ್ನು ಯೋಜಿಸುವ ಮೂಲಕ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ನಮ್ಮ ಸರಕಾರದ ಹೆಮ್ಮೆ ಎಂದರು.
ವಿಶ್ವ ವಿದ್ಯಾಲಯಗಳಲ್ಲಿ ರೈತ ಮಕ್ಕಳ ಮೀಸಲಾತಿ ಏರಿಕೆಯಾಗಿದ್ದು, ರೈತ ವಿದ್ಯಾನಿಧಿ ಯೋಜನೆಯನ್ನು ರೈತ ಕಾರ್ಮಿಕ ಮಕ್ಕಳಿಗೂ ವಿಸ್ತರಿಸಲಾಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಮೊದಲದಿನವೇ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ಸಚಿವ ಕೈಲಾಸ್‍ನಾಥ್ ಚೌಧರಿ, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್, ಸಚಿವ ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಅ.ದೇವೇಗೌಡ, ನಾರಾಯಣಸ್ವಾಮಿ ಹೆಬ್ಬಾಳ, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.