BMTC ಇ-ಬಸ್ ಓಡಿಸಲು ತರಬೇತಿ; ಪ್ರಥಮ ಮಹಿಳಾ ಚಾಲಕಿಯಾಗಲಿದ್ದಾರೆ ದುಗ್ಗಮ್ಮ

Update: 2023-01-20 14:53 GMT

ಬೆಂಗಳೂರು, ಜ.20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಚಾಲನೆಗೆ ಮಹಿಳಾ ಸಿಬ್ಬಂದಿ ಮುಂದಾಗಿದ್ದು, ಯಲಹಂಕ ಡಿಪೋದಲ್ಲಿ ತರಬೇತಿ ನೀಡಲಾಗುತ್ತಿದೆ.

ಸುಮಾರು 15 ದಿನಗಳ ತರಬೇತಿಯ ನಂತರ ಮಹಿಳೆಯರು ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಲು ಪ್ರಾರಂಭಿಸಲಿದ್ದು, ಇದೀಗ 32 ವರ್ಷದ ದುಗ್ಗಮ್ಮ ಎಂಬುವರು ಚಾಲನಾ ತರಬೇತಿ ನೀಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುಗ್ಗಮ್ಮ ಅವರು ಫೆಬ್ರುವರಿಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಓಡಿಸಲಿದ್ದು, ಈ ಮೂಲಕ ಬಿಎಂಟಿಸಿ ಮಹಿಳೆಯರನ್ನು ಚಾಲಕರನ್ನಾಗಿ ಹೊಂದಿದ ಏಕೈಕ ನಿಗಮವಾಗಿ ಹೊರ ಹೊಮ್ಮಲಿದೆ ನಿಗಮ ತಿಳಿಸಿದೆ.

ದುಗ್ಗಮ್ಮ ಅವರಿಗೆ ಎಲೆಕ್ಟ್ರಿಕ್ ಬಸ್‍ಗಳನ್ನು ಚಾಲನೆ ಮಾಡುವ ಬಗ್ಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. ಸ್ವಿಚ್ ಮೊಬಿಲಿಟಿ ಅಂಗಸಂಸ್ಥೆ ಚಾಲಕಿಯರನ್ನು ನೇಮಿಸಿಕೊಂಡಿದೆ. ಮೊದಲು ಒಬ್ಬರನ್ನು ಚಾಲಕಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹತ್ತು ಮಂದಿ ಮಹಿಳೆಯರು ಚಾಲಕಿಯರಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ತಿಳಿಸಿದ್ದಾರೆ.

ತರಬೇತಿ ನಿರತ ಚಾಲಕಿ ದುಗ್ಗಮ್ಮ ಕೆ.ಬಿ.ಮಾತನಾಡಿ, 2019ರಲ್ಲಿ ನಿರ್ಭಯ ನಿಧಿಯಡಿ ಬಿಎಂಟಿಸಿಯ ಉಚಿತ ಚಾಲನಾ ತರಬೇತಿ ಯೋಜನೆಯಡಿ ಲಘು ಮೋಟಾರು ವಾಹನ ಪರವಾನಗಿಯನ್ನು ಪಡೆದುಕೊಂಡಿದ್ದೇನೆ. ಬಳಿಕ 2021ರಲ್ಲಿ ಅದೇ ಯೋಜನೆಯಡಿ ಮಾಗಡಿ ರಸ್ತೆಯ ವಡ್ಡರಹಳ್ಳಿಯ ಬಿಎಂಟಿಸಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದೇನೆ. ಎಚ್‍ಪಿವಿ ಪರವಾನಗಿ ಪಡೆದಿದ್ದೇನೆ ಎಂದು ತಿಳಿಸಿದರು.

Similar News