ಓ ಮೆಣಸೇ...

Update: 2023-02-05 19:30 GMT

ಜೆಡಿಎಸ್‌ನವರ ‘ಪಂಚರತ್ನ ಯಾತ್ರೆ’ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ -ನಳಿನ್ ಕುಮಾರ್ ಕಟೀಲು

ನಿಮ್ಮ ರೈಲಿನ ಅಪಾಯ ಏನೆಂದರೆ ಅದು ಬ್ರೇಕ್ ಫೇಲ್ ಆದ ಬಳಿಕವೂ ಕುರುಡಾಗಿ ಓಡುತ್ತಲೇ ಇದೆ.

---------------------
 ನನಗೆ 80 ವರ್ಷ ಪ್ರಾಯವಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ -ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
 ನಾನಿನ್ನು ಮನೆಯಲ್ಲಿ ಕೂರುತ್ತೇನೆ ಎಂದು ಘೋಷಿಸುವುದಕ್ಕೆ ಇನ್ನೆಷ್ಟು ದಶಕಗಳು ಉರುಳಬೇಕು?

---------------------
ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದರೆ ನಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮೆ ಕಾಂಗ್ರೆಸ್‌ನವರಲ್ಲಿದೆ -ಕೆ.ಎಸ್.ಈಶ್ವರಪ್ಪ, ಶಾಸಕ
 ನಿಮ್ಮ ಗತಿ ನೋಡಿದ ಯಾರಿಗೂ ಅಂತಹ ಭ್ರಮೆ ಇಲ್ಲ.
---------------------
 ಕೇಂದ್ರ ಸಚಿವ ಅಮಿತ್ ಶಾ ವ್ಯಕ್ತಿತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಛಾಯೆ ಇದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
  ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೆಂಬ ಕಾರಣಕ್ಕಾಗಿ ಹೀಗೆಲ್ಲ ಹೇಳಿ ಅವರ ಆತ್ಮಕ್ಕೆ ಕಿರುಕುಳ ನೀಡುವುದು ಸರಿಯಲ್ಲ.

---------------------
 ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿಸುತ್ತಿದೆ -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
 ವೀಡಿಯೊ ಗೇಮ್ ನೋಡಿದಿರಾ ಸ್ವಾಮೀಜಿ?

---------------------
 ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇರುವುದರಿಂದ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ -ಎಸ್.ಎಲ್.ಭೈರಪ್ಪ, ಸಾಹಿತಿ
 ಹೌದು. ಅನ್ಯಥಾ ಚಿಲ್ಲರೆ ದಕ್ಷಿಣೆ ಮಾತ್ರ ಸಿಗುತ್ತಿತ್ತು.

---------------------
 ನನ್ನನ್ನು ರಾಷ್ಟ್ರಪತಿ ಮಾಡುತ್ತೇನೆ ಎಂದರೂ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ
 ಭಾರತದಲ್ಲಿ ರಾಷ್ಟ್ರಪತಿ ಆಗುವುದಕ್ಕಿಂತ ಮುನ್ಸಿಪಾಲಿಟಿ ಸದಸ್ಯನಾಗುವುದು ಲೇಸು. ಒಂದಿಷ್ಟಾದರೂ ಸ್ವಾತಂತ್ರವಿರುತ್ತದೆ.

---------------------
 ಮಹಾಭಾರತದಲ್ಲಿದ್ದಂತೆ ಈಗಿನ ರಾಜಕೀಯದಲ್ಲೂ ನೂರಾರು ಶಕುನಿಗಳಿದ್ದಾರೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
 ಶಕುನಿಗಳ ಕುರಿತು ಶಕುನಿಗಳೇ ಹೇಳಿದರೆ ಚೆನ್ನಾಗಿರುತ್ತದೆ.

---------------------
 ಭಗವಾನ್ ಕೃಷ್ಣ ಹಾಗೂ ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು -ಎಸ್.ಜೈಶಂಕರ್, ಕೇಂದ್ರ ಸಚಿವ
 ಮೆಲ್ಲಗೆ ಹೇಳಿ ಸಾರ್. ಎಲ್ಲಾದರೂ ಮೋದಿಯವರು ಕೇಳಿ ಬಿಟ್ಟರೆ ನಿಮ್ಮ ಚರ್ಮ ಸುಲಿಯುತ್ತಾರೆ. ಅವರ ಮುಂದೆ ಕೃಷ್ಣ, ಹನುಮಂತ ಇವರೆಲ್ಲಾ ಯಾವ ಲೆಕ್ಕ?

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ... ಎಂದು ರಾಯರಲ್ಲಿ ಬೇಡಿಕೊಂಡಿದ್ದೇನೆ -ಅನಿತಾ ಕುಮಾರಸ್ವಾಮಿ, ಶಾಸಕಿ
ಯಾರನ್ನು?

---------------------

ಹೊಂದಾಣಿಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ-ಸಿ.ಟಿ.ರವಿ, ಶಾಸಕ
ಸದ್ಯ ಹೊಂದಾಣಿಕೆಗೆ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರಾದರೂ ತಯಾರಿದ್ದಾರೆಯೇ?

---------------------
 ಅಭಿವ್ಯಕ್ತಿ ಸ್ವಾತಂತ್ರದ ಹೆಸರು ಹೇಳಿಕೊಂಡು ದೇಶದ ಜನರಲ್ಲಿ ಒಡಕು ಮೂಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ಜನತೆ ಎಚ್ಚರದಿಂದಿರಬೇಕು
-ನರೇಂದ್ರ ಮೋದಿ, ಪ್ರಧಾನಿ
ಅಭಿವೃದ್ಧಿಯ ಹೆಸರಲ್ಲಿ ದೇಶವನ್ನು ಅದಾನಿಗಳಿಗೆ ಮಾರಿ ಬಿಟ್ಟವರ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ.

---------------------
 ದೇಶ, ಹಿಂದುತ್ವ ಮತ್ತು ಸಮಾಜಕ್ಕಾಗಿ ಕ್ಷತ್ರಿಯರ ಹೋರಾಟ ಶ್ಲಾಘನೀಯ -ಅರವಿಂದ ಲಿಂಬಾವಳಿ, ಶಾಸಕ
 ಹೀಗೆಲ್ಲ ಹೇಳಿ ಪರಶುರಾಮನ ಕೊಡಲಿಯನ್ನು ಕೆರಳಿಸಬೇಡಿ.

--------------------
 ಅಲ್ಪಸಂಖ್ಯಾತರು ಜೆಡಿಎಸ್‌ಗೆ ಒಂದು ಮತ ಹಾಕಿದರೂ ಅದು ಬಿಜೆಪಿಗೆ ಶಕ್ತಿ ತುಂಬಿದಂತಾಗುತ್ತದೆ -ಝಮೀರ್ ಅಹ್ಮದ್, ಶಾಸಕ
 ಆದ್ದರಿಂದ ಅವರು ನೇರವಾಗಿ ಬಿಜೆಪಿಗೇ ಓಟು ಕೊಟ್ಟುಬಿಟ್ಟರೆ ಚೆನ್ನ. ಅಲ್ಲವೇ?

 ---------------------
 ಯಾರೋ ನಾಲ್ವರು ಬಂದು ಹೇಳಿದ ತಕ್ಷಣ ಬಿಜೆಪಿ ಟಿಕೆಟ್ ನೀಡಲು ಸಾಧ್ಯವಿಲ್ಲ -ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ
 ಐದು ಮಂದಿಯಾದರೂ ಹೇಳ್ಬೇಕು ಅಂತೀರಾ?

---------------------
 ಪ್ರತೀ ಬಾರಿ ಇಂತಹ ಘಟನೆಗಳು (ಬಿಬಿಸಿ ಸಾಕ್ಷಚಿತ್ರ) ನಡೆದಾಗಲೂ ಪ್ರಧಾನಿ ಮೋದಿಗೆ ಹಿಂಬಾಲಕರು ಹೆಚ್ಚಾಗುತ್ತಾರೆ
-ತೇಜಸ್ವಿ ಸೂರ್ಯ, ಸಂಸದ
ನೀವು ಎಮರ್ಜೆನ್ಸಿ ಡೋರ್ ತೆರೆದಾಗ ಆದಂತೆ?

---------------------
 
1985ರಲ್ಲಿ ಡಿ.ಕೆ.ಶಿವಕುಮಾರ್ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದ. ಈಗ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ -ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹರಿದ ಚಪ್ಪಲಿ ಕದ್ದ ಚಪ್ಪಲಿಯಾಗಿರಲಿಲ್ಲ ಎಂದು ಅವರು ಅಭಿಮಾನ ಪಡುತ್ತಾರಲ್ಲಾ?
 
ಬಿಲ್ಲವ ಸಮುದಾಯದಲ್ಲಿ ಸದೃಢ ನಾಯಕತ್ವವನ್ನು ಹೆಚ್ಚಿಸಿದರೆ ವಿಧಾನಸೌಧ ಮತ್ತು ಸಂಸತ್‌ನಲ್ಲಿ ಸಮುದಾಯದ ಪರ ಧ್ವನಿ ಮೊಳಗಲು ಸಾಧ್ಯವಾಗುತ್ತದೆ -ಕೆ.ಹರೀಶ್ ಕುಮಾರ್, ವಿ.ಪ. ಸದಸ್ಯ
  ಹಾಗೆ ಆಗಿ ಬಿಟ್ಟರೆ ಮತ್ತೆ ಸಂಘ ಪರಿವಾರಕ್ಕಾಗಿ ರೌಡಿಸಂ ಮಾಡಲು, ಜೈಲಿಗೆ ಹೋಗಲು ಯಾರು ಉಳಿಯುತ್ತಾರೆ?

 ---------------------
 ನಾನು ಸಾಯುತ್ತೇನೆಯೇ ಹೊರತು ಬಿಜೆಪಿ ಜೊತೆ ಪುನಃ ಕೈಜೋಡಿಸುವುದಿಲ್ಲ -ನಿತೀಶ್ ಕುಮಾರ್, ಬಿಹಾರ ಸಿಎಂ
ಇತ್ತೀಚೆಗೆ ನಿಮಗೆ ಡೈಲಾಗ್‌ಗಳನ್ನು ಕುಮಾರಸ್ವಾಮಿಯವರು ಬರೆದು ಕೊಡುತ್ತಿದ್ದಾರೆಯೇ?

---------------------
 ಮಾಜಿ ಪ್ರಧಾನಿ ದೇವೇಗೌಡರನ್ನು ಉತ್ಸವ ಮೂರ್ತಿ ಮಾಡಿಕೊಂಡು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ -ಬಿಜೆಪಿ
 ನೀವು ಶ್ರೀರಾಮನನ್ನು ರಾಜಕಾರಣಕ್ಕೆ ಬಳಸುತ್ತಿರುವುದಕ್ಕೆ ಹೋಲಿಸಿದರೆ ಇದು ಎಷ್ಟೋ ವಾಸಿ.
 

---------------------
 ಗೋಧ್ರೋತ್ತರ ಘಟನೆಯ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷಚಿತ್ರದ ಹಿಂದೆ ಚೀನಾ ನೀಡಿದ ಹಣಕಾಸು ನೆರವಿನ ಕೈವಾಡ ಅಡಗಿದೆ -ಮಹೇಶ್ ಜೇಠ್ಮಲಾನಿ, ಸಂಸದ
 ಹಿಂದೆ ರಾಮ್ ಜೇಠ್ಮಲಾನಿ ಎಂಬೊಬ್ಬರು ತಕ್ಷಣದ ಸ್ವಾರ್ಥಗಳಿಗಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರು. ಕೊನೆಗೆ ಸಾಯುವ ಮುನ್ನ ಬಹಿರಂಗವಾಗಿ ಪಶ್ಚಾತ್ತಾಪಪಟ್ಟಿದ್ದರು.

---------------------

 ಪ್ರಧಾನಿ ಮೋದಿ ನೇತೃತ್ವದ ಸರಕಾರ ಪಕ್ಷಪಾತ ಮಾಡದೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತದೆ -ದ್ರೌಪದಿ ಮುರ್ಮು, ರಾಷ್ಟ್ರಪತಿ
 ನಿಮ್ಮ ಈ ಬಗೆಯ ಪರಮ ಅಸಹಾಯಕತೆಯ ಹೇಳಿಕೆಗಳು ಅವರ ನಿಷ್ಪಕ್ಷ ಧೋರಣೆಯನ್ನು ಬಿಚ್ಚಿಡುತ್ತವೆ.

---------------------
 15 ವರ್ಷಕ್ಕಿಂತ ಹಳೆಯ 9 ಲಕ್ಷ ಸರಕಾರಿ ವಾಹನಗಳು ಮತ್ತು ಬಸ್‌ಗಳನ್ನು ಎಪ್ರಿಲ್ ಒಂದರಿಂದ ಗುಜರಿಗೆ ಹಾಕಲಾಗುವುದು
-ನಿತಿನ್ ಗಡ್ಕರಿ, ಕೇಂದ್ರ ಸಚಿವ
ಸಂವಿಧಾನವನ್ನು ಗುಜರಿಗೆ ಹಾಕಲು ಇದೇ ಕಾರಣವನ್ನು ಬಳಸುವ ಅಪಾಯ ಇದೆ.

---------------------

 ಗೋಡ್ಸೆ ಸಿದ್ಧಾಂತದವರು ದೇಶದಿಂದ ಕಿತ್ತುಕೊಂಡದ್ದನ್ನು ರಾಹುಲ್ ಗಾಂಧಿ ವಾಪಸ್ ಕೊಡಬಲ್ಲರು -ಮೆಹಬೂಬ ಮುಫ್ತಿ, ಪಿಡಿಪಿ ಮುಖ್ಯಸ್ಥೆ
 ಒಟ್ಟಿನಲ್ಲಿ ರಾಹುಲ್ ಅವರನ್ನು ಇನ್ನೊಬ್ಬ ಗಾಂಧಿಯಾಗಿಸಿ ಗೋಡ್ಸೆಗೆ ಬಲಿ ಕೊಡಲು ಕೆಲವರು ತೀರ್ಮಾನಿಸಿದಂತಿದೆ.

---------------------
 ‘ಪಠಾಣ್’ ಸಿನೆಮಾ ಬಿಡುಗಡೆಯಾದಾಗಿನಿಂದ ಸಿಕ್ಕಿರುವ ಪ್ರೀತಿ ಕಳೆದ 4 ವರ್ಷಗಳಲ್ಲಿ ಸಿನೆಮಾ ಮಾಡದ ಬೇಸರವನ್ನು ಮರೆಸಿದೆ
-ಶಾರುಕ್ ಖಾನ್, ನಟ
 ಅದು ನಿಮಗೆ ಸಿಕ್ಕಿರುವ ಪ್ರೀತಿಯೋ? ನಾಯಕಿ ಧರಿಸದೇ ಇರುವ ಬಟ್ಟೆಗೆ ಸಿಕ್ಕಿರುವ ಪ್ರೀತಿಯೋ ಖಚಿತ ಮಾಡಿಕೊಳ್ಳಿ 

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!