ತಮಿಳುನಾಡು: ಡಿಎಂಕೆ ಕೌನ್ಸಿಲರ್‌ ಮತ್ತು ಸಂಗಡಿಗರಿಂದ ಥಳಿತಕ್ಕೊಳಗಾಗಿದ್ದ ಯೋಧ ಸಾವು

Update: 2023-02-15 20:20 IST
ತಮಿಳುನಾಡು: ಡಿಎಂಕೆ ಕೌನ್ಸಿಲರ್‌ ಮತ್ತು ಸಂಗಡಿಗರಿಂದ ಥಳಿತಕ್ಕೊಳಗಾಗಿದ್ದ ಯೋಧ ಸಾವು
  • whatsapp icon

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಕೌನ್ಸಿಲರ್ ನೇತೃತ್ವದ ಗುಂಪಿನಿಂದ ದಾಳಿಗೆ ಒಳಗಾಗಿದ್ದ ಯೋಧ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತ ಯೋಧನನ್ನು 29 ವರ್ಷದ ಪ್ರಭು ಎಂದು ಗುರುತಿಸಲಾಗಿದ್ದು, ಅವರು ಜಮ್ಮು ಮತ್ತು ಕಾಶ್ಮೀರದಲ್ಲೂ ಸೇವೆ ಸಲ್ಲಿಸಿದ್ದರು.

ಕೃಷ್ಣಗಿರಿ ಜಿಲ್ಲೆಯ ಸಾರ್ವಜನಿಕ ಟ್ಯಾಂಕಿಯ ಬಳಿ ಬಟ್ಟೆ ಒಗೆಯುವ ವಿಚಾರದಲ್ಲಿ ಉಂಟಾದ ವಾಗ್ವಾದದ ನಂತರ ಡಿಎಂಕೆ ಕೌನ್ಸಿಲರ್ ಮತ್ತು ಎಂಟು ಮಂದಿ ಸಂಗಡಿಗರು ಯೋಧ ಪ್ರಭುರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೌನ್ಸಿಲರ್ ಸೇರಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ವಿರೋಧ ಪಕ್ಷ ಎಐಎಡಿಎಂಕೆ ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಖಂಡಿಸಿದೆ.

ಡಿಎಂಕೆ ಅಧಿಕಾರದಲ್ಲಿದ್ದಾಗಲೆಲ್ಲ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ರಾಜಿಯಾಗಿದೆ ಎಂಬುದನ್ನು ಸೇನಾಧಿಕಾರಿಯ ಹತ್ಯೆಯು ತೋರಿಸುತ್ತದೆ. ಇದು ಸೇನಾಧಿಕಾರಿಯನ್ನು ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪೊಲೀಸರನ್ನು ಎಐಎಡಿಎಂಕೆ ಮತ್ತು ಇತರ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

Similar News