ಮಾ.1ರಿಂದ BJP ರಥಯಾತ್ರೆ ಆರಂಭ: 3 ತಿಂಗಳು ದಣಿವರಿಯದೇ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸಿಎಂ ಕರೆ
ಬೆಂಗಳೂರು, ಫೆ.15: ಬಿಜೆಪಿ ರಥಯಾತ್ರೆಯೂ ಮಾ.1ರಿಂದ ಆರಂಭವಾಗಲಿದ್ದು, ಮೂರು ತಿಂಗಳು ಎಲ್ಲರೂ ದಣಿವರಿಯದೇ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಪ್ರಭಾರಿಗಳಿಗೆ ಕರೆ ನೀಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿಯ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ಜನರನ್ನು ಸೆಳೆಯಲು ಪ್ರತಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮಹಿಳಾ, ಯುವಕ, ರೈತ ಮೋರ್ಚಾಗಳ ವತಿಯಿಂದ ತಾಲೂಕು ಮಟ್ಟದ ಸಮ್ಮೇಳನ ಮಾಡಬೇಕು. ರಾಜ್ಯ ಸರಕಾರದ ಯೋಜನೆಗಳನ್ನು ಕ್ಷೇತ್ರಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಮಾಡಿ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಸೂಚಿಸಿದರು.
ಮುಂದಿನ ಮೂರುವರೆ ತಿಂಗಳು ಕರ್ನಾಟಕದ ಚುನಾವಣೆಗೆ ಪ್ರಮುಖ ಪಾತ್ರವಹಿಸುವವರೆಲ್ಲರೂ ಒಂದೆಡೆ ಸೇರಿದ್ದೇವೆ. ಒಂದು ವಿಧಾನಸಭಾ ಕ್ಷೇತ್ರ ಗೆಲ್ಲಲು ಯಾವ ರೀತಿ ರಣನೀತಿಯನ್ನು ರೂಪಿಸಬೇಕು ಎನ್ನುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ. ನರೇಂದ್ರ ಮೋದಿಯವರ ನಾಯಕತ್ವವಿರುವ ಕೇಂದ್ರ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಕಳೆದ 8 ವರ್ಷದಿಂದ ನೀಡುತ್ತ ಬಂದಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಕೋವಿಡ್ ನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದ್ದೇವೆ. ನಾನು ಮುಖ್ಯಮಂತ್ರಿಯಾದ ಮೇಲೆ ಪ್ರವಾಹ ನಿರ್ವಹಣೆ ಮಾಡಿ. ಜನರಿಗೆ ಹಲವು ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಈ ಎಲ್ಲ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ ಮನದಟ್ಟು ಮಾಡುವ ಅವಶ್ಯಕತೆಯಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.