ಗ್ರಾಮೀಣ ಭಾರತಕ್ಕೆ ಸಂಕಷ್ಟದ ಕಾಲ

Update: 2023-02-16 18:34 GMT

ನರೇಗಾ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಹಣಕಾಸಿನ ಕೊರತೆ. ಜತೆಗೆ, ಯೋಜನೆಯ ಸಂರಚನೆಯಲ್ಲೇ ಲೋಪಗಳಿವೆ. ಹಣ ಬಿಡುಗಡೆಯಲ್ಲಿ ವಿಳಂಬ, ತಾಂತ್ರಿಕ ಸಮಸ್ಯೆಗಳು, ರಾಜ್ಯ ಸರಕಾರಗಳ ನಿರ್ಲಕ್ಷ, ಭ್ರಷ್ಟಾಚಾರ ಇತ್ಯಾದಿ ಸಮಸ್ಯೆಗಳಿವೆ (ಸಿಎಜಿ ವರದಿ). ಆದರೆ, ನರೇಗಾದಿಂದ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯದ ಬಲವರ್ಧನೆ, ಬಡಜನರ ವರಮಾನ ಏರಿಕೆ, ಉದ್ಯೋಗಾವಕಾಶದಲ್ಲಿ ಲಿಂಗ ತಾರತಮ್ಯ ಮತ್ತು ಜಾತಿ ಆಧಾರಿತ ಅಸಮಾನತೆ ಕಡಿಮೆ, ಶಾಶ್ವತ ಆಸ್ತಿಗಳು ನಿರ್ಮಾಣವಾಗಿವೆ. ಹೀಗಿದ್ದರೂ, ಈ ಯೋಜನೆಗೆ ಪ್ರತಿವರ್ಷ ಅನುದಾನದ ಕೊರತೆ ತಪ್ಪಿದ್ದಲ್ಲ.


ಆಯವ್ಯಯ ಎನ್ನುವುದು ಅಂಕಿಸಂಖ್ಯೆಗಳ ಆಟ. ಅದಕ್ಕೆ ಅನುಗುಣವಾಗಿ ಕ್ರಿಯಾಶೀಲ ಅನುಷ್ಠಾನ ಇರಬೇಕಾಗುತ್ತದೆ. ಕೃಷಿಯೊಟ್ಟಿಗೆ ಗ್ರಾಮೀಣರ ಕೈ ಹಿಡಿದಿದ್ದ ಉದ್ಯೋಗ ಖಾತ್ರಿ ಯೋಜನೆ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಎಂ-ನರೇಗಾ) ನಿಶ್ಶಕ್ತಗೊಂಡಿದೆ. ಹಾಲಿ ಬಜೆಟ್‌ನಲ್ಲಿ ಶೇ.32ರಷ್ಟು ಅನುದಾನ ಕಡಿತಗೊಂಡಿದೆ. ಇತಿಹಾಸ ಒಂದು ಹೊರಳು ಹೊರಳಿದೆ.

ದೀರ್ಘ ಇತಿಹಾಸ:
ಉದ್ಯೋಗ ಖಾತರಿ ಯೋಜನೆಗೆ ದೀರ್ಘ ಇತಿಹಾಸವಿದೆ. ಒಕ್ಕೂಟ ಸರಕಾರ ಅರವತ್ತರ ದಶಕದಲ್ಲಿ ಜಾರಿಗೊಳಿಸಿದ ಗ್ರಾಮೀಣ ಮಾನವ ಸಂಪನ್ಮೂಲ ಯೋಜನೆ(ರೂರಲ್ ಮ್ಯಾನ್‌ಪವರ್ ಪ್ರೋಗ್ರಾಂ) ಯಶಸ್ವಿಯಾಗಲಿಲ್ಲ. ಆನಂತರ, ಎಪ್ಪತ್ತರ ದಶಕದಲ್ಲಿ ಮಹಾರಾಷ್ಟ್ರ ಅನುಷ್ಠಾನಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉದ್ಯೋಗ ನೀಡಲಾಯಿತು. ಆನಂತರದ್ದು ಗ್ರಾಮೀಣ ಭೂರಹಿತರಿಗೆ ಉದ್ಯೋಗ ಖಾತ್ರಿ ಯೋಜನೆ(ರೂರಲ್ ಲ್ಯಾಂಡ್‌ಲೆಸ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಪ್ರೋಗ್ರಾಂ). 1989ರಲ್ಲಿ ಎಲ್ಲ ಯೋಜನೆಗಳು ವಿಲೀನಗೊಂಡು 'ಜವಾಹರ್ ರೋಜ್ಗಾರ್ ಯೋಜನೆ'(ಜೆಎವೈ) ಜಾರಿಗೊಂಡಿತು. ಇದಕ್ಕಾಗಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಸುಮಾರು 200 ಶತಕೋಟಿ ರೂ. ವೆಚ್ಚಮಾಡಿತು. ಯೋಜನೆಯನ್ನು ರಾಜ್ಯಗಳು ಅನುಷ್ಠಾನಗೊಳಿಸಿದರೂ, ಕೇಂದ್ರ ಸರಕಾರ ವೆಚ್ಚವನ್ನು ಭರಿಸುತ್ತಿತ್ತು.


1990ರಲ್ಲಿ ಕಾಂಗ್ರೆಸ್ ಸರಕಾರ ಉದ್ಯೋಗ ಆಶ್ವಾಸನಾ ಯೋಜನೆಯನ್ನು ಜಾರಿಗೊಳಿಸಿತು. ಎನ್‌ಡಿಎ ಸರಕಾರ ಯೋಜನೆ ಹೆಸರನ್ನು 'ಜವಾಹರ್ ಗ್ರಾಮ ಸಮೃದ್ಧಿ ಯೋಜನೆ' ಎಂದು ಬದಲಿಸಿತು. 2001ರಲ್ಲಿ ಜವಾಹರ್ ರೋಜ್ಗಾರ್ ಯೋಜನೆ ಹಾಗೂ ಉದ್ಯೋಗ ಆಶ್ವಾಸನಾ ಯೋಜನೆಗಳನ್ನು ಒಗ್ಗೂಡಿಸಿ, 'ಸಂಪೂರ್ಣ ಗ್ರಾಮೀಣ ರೋಜ್ಗಾರ್ ಯೋಜನೆ' ಎಂದು ನಾಮಕರಣ ಮಾಡಲಾಯಿತು. 2004ರಲ್ಲಿ ಕೂಲಿಗಾಗಿ ಕಾಳು ಯೋಜನೆ(ನ್ಯಾಷನಲ್ ಫುಡ್ ಫಾರ್ ವರ್ಕ್ ಪ್ರೋಗ್ರಾಂ) ಆರಂಭಗೊಂಡಿತು. ಆದರೆ, ಯೋಜನೆಗಳ ಹೆಸರು ಬದಲಾಯಿತೇ ಹೊರತು ಹಸಿವು ನಿವಾರಣೆಯಾಗಲಿಲ್ಲ. ಅನುಷ್ಠಾನದಲ್ಲಿದ್ದ ಲೋಪದೋಷಗಳು, ಆರ್ಥಿಕ ಸಂಪನ್ಮೂಲದ ಕೊರತೆ ಇತ್ಯಾದಿ ಕಾರಣದಿಂದ ಯೋಜನೆಗಳು ವಿಫಲವಾದವು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ, 2005:
ಯುಪಿಎ ಸರಕಾರ 2005ರ ಸೆಪ್ಟಂಬರ್ 7ರಂದು 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ'(ನರೇಗಾ) ಜಾರಿಗೊಳಿಸಿತು. ಅಕ್ಟೋಬರ್ 2, 2009ರಂದು ಈ ಅಧಿನಿಯಮ 'ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ'(ಎಂ ನರೇಗಾ) ಎಂದು ಬದಲಾಯಿತು. ಮೊದಲ ಹಂತದಲ್ಲಿ 200 ಗ್ರಾಮಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಸೆಪ್ಟಂಬರ್ 7, 2010ರಿಂದ ಇಡೀ ದೇಶಕ್ಕೆ ವಿಸ್ತರಿಸಲಾಯಿತು. ನರೇಗಾದ ಉದ್ದೇಶವೆಂದರೆ, ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಅದಕ್ಕೆ ಸೂಕ್ತ ವೇತನ ನೀಡುವುದು ಮತ್ತು ಉದ್ಯೋಗ ನೀಡಲು ಆಗದಿದ್ದಲ್ಲಿ ಪರಿಹಾರ ನೀಡುವುದು. ಅಂದಾಜಿನ ಪ್ರಕಾರ, ಪ್ರತೀ ಮೂರು ಗ್ರಾಮೀಣ ಕುಟುಂಬಗಳಲ್ಲಿ ಒಂದಕ್ಕೆ ಯೋಜನೆಯ ಫಲ ಸಿಕ್ಕಿದೆ. ನರೇಗಾ ವೆಬ್‌ಸೈಟ್ ಪ್ರಕಾರ, 2021-22ರಲ್ಲಿ 6.51 ಕೋಟಿ ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ ಅಂದಾಜು ಶೇ.40ರಷ್ಟು ಫಲಾನುಭವಿಗಳು ಪರಿಶಿಷ್ಟ ವರ್ಗ-ಜಾತಿಗೆ ಸೇರಿದವರು. ಆದರೆ, ಮೂಲಭೂತವಾಗಿ ಬೇಡಿಕೆ ಆಧಾರಿತ ಯೋಜನೆಯಾದ ನರೇಗಾ, ಇತ್ತೀಚಿನ ವರ್ಷಗಳಲ್ಲಿ ಸರಬರಾಜು ಆಧರಿತ ಆಗಿ ಮಾರ್ಪಟ್ಟಿದೆ.
ನರೇಗಾ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಹಣಕಾಸಿನ ಕೊರತೆ. ಜತೆಗೆ, ಯೋಜನೆಯ ಸಂರಚನೆಯಲ್ಲೇ ಲೋಪಗಳಿವೆ. ಹಣ ಬಿಡುಗಡೆಯಲ್ಲಿ ವಿಳಂಬ, ತಾಂತ್ರಿಕ ಸಮಸ್ಯೆಗಳು, ರಾಜ್ಯ ಸರಕಾರಗಳ ನಿರ್ಲಕ್ಷ, ಭ್ರಷ್ಟಾಚಾರ ಇತ್ಯಾದಿ ಸಮಸ್ಯೆಗಳಿವೆ (ಸಿಎಜಿ ವರದಿ). ಆದರೆ, ನರೇಗಾದಿಂದ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯದ ಬಲವರ್ಧನೆ, ಬಡಜನರ ವರಮಾನ ಏರಿಕೆ, ಉದ್ಯೋಗಾವಕಾಶದಲ್ಲಿ ಲಿಂಗ ತಾರತಮ್ಯ ಮತ್ತು ಜಾತಿ ಆಧಾರಿತ ಅಸಮಾನತೆ ಕಡಿಮೆ, ಶಾಶ್ವತ ಆಸ್ತಿಗಳು ನಿರ್ಮಾಣವಾಗಿವೆ. ಹೀಗಿದ್ದರೂ, ಈ ಯೋಜನೆಗೆ ಪ್ರತಿವರ್ಷ ಅನುದಾನದ ಕೊರತೆ ತಪ್ಪಿದ್ದಲ್ಲ. ಪ್ರಸಕ್ತ ಆಯವ್ಯಯದಲ್ಲಿ ನಿಗದಿಪಡಿಸಿದ ಅನುದಾನ 60,000 ಕೋಟಿ ರೂ. ಇದು 2020-2021ರ ಮೊತ್ತ 1,11,500 ಕೋಟಿ ರೂ.ಗೆ ಹೋಲಿಸಿದರೆ, ಶೇ.32ರಷ್ಟು ಕಡಿಮೆ. ಅಷ್ಟಲ್ಲದೆ, ವೇತನ ವಿತರಣೆ ತೀರ ವಿಳಂಬವಾಗುತ್ತಿದೆ. ಸುಪ್ರೀಂ ಕೋರ್ಟ್ ಈ ಹೀನಾಯ ಸ್ಥಿತಿ, ''ಜೀತಕ್ಕಿಂತ ಕಡಿಮೆಯದಲ್ಲ. ಇದು ಸಂವಿಧಾನದ ವಿಧಿ 23ನ್ನು ಉಲ್ಲಂಘಿಸುತ್ತದೆ'' ಎಂದು ಹೇಳಿತ್ತು.
ನರೇಗಾಕ್ಕೆ ಅನುದಾನ ಕಡಿತ ಆರಂಭವಾಗಿದ್ದು ಯುಪಿಎ-2ರ ಅವಧಿಯಲ್ಲಿ. ಹಕ್ಕು ಆಧರಿತ ಕಾನೂನುಗಳ ಬಗ್ಗೆ ತೀವ್ರ ಹೇವರಿಕೆ ಇರುವ ಈಗಿನ ಸರಕಾರದ ಕಾಲದಲ್ಲಿ ಅದು ಗಗನ ಮುಟ್ಟಿದೆ. ತಮಾಷೆಯೆಂದರೆ, ಫೆಬ್ರವರಿ 2015ರಲ್ಲಿ ಪ್ರಧಾನಿ ''ಕಳೆದ 60 ವರ್ಷದಲ್ಲಿ ಬಡತನವನ್ನು ನಿವಾರಿಸುವಲ್ಲಿ ಕಾಂಗ್ರೆಸ್‌ನ ವೈಫಲ್ಯದ ಜೀವಂತ ಸ್ಮಾರಕ ಎನ್ನಬಹುದಾದ ಈ ಯೋಜನೆಯನ್ನು ನಾನು ಸ್ಥಗಿತಗೊಳಿಸುವುದಿಲ್ಲ'' ಎಂದು ಹೇಳಿದ್ದರು. 2008-09ರ ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರ ನೆರವಿಗೆ ಬಂದಿದ್ದು ಈ ಕಾರ್ಯಕ್ರಮಕ್ಕೆ ನೀಡಿದ 40,000 ಕೋಟಿ ರೂ. ಹಾಗೂ ರಾಷ್ಟ್ರೀಯ ಆಹಾರ ಸುರಕ್ಷೆ ಕಾಯ್ದೆ ಅಡಿ ನೀಡಿದ 5 ಕೆಜಿ ಅಕ್ಕಿ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಉದ್ಯೋಗ ನಷ್ಟದಿಂದಾದ ಆದಾಯದಲ್ಲಿ ಶೇ.90ರಷ್ಟನ್ನು ನರೇಗಾ ಕೂಲಿ ಭರ್ತಿ ಮಾಡಿತ್ತು.
ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಅನುದಾನ ಕೊರತೆಯನ್ನು ಸರಿದೂಗಿಸಲು, ವೇತನ ಬಾಕಿಯಂತಹ ವೆಚ್ಚ ಕಡಿತದ ಮಾರ್ಗಗಳನ್ನು ಹಿಡಿಯುತ್ತದೆ. ವೇತನ ಬಾಕಿಯನ್ನು ಮುಂದಿನ ವರ್ಷದ ಅನುದಾನದಲ್ಲಿ ಸರಿದೂಗಿಸಲಾಗುತ್ತದೆ. ಬಹುತೇಕ ಎಲ್ಲ ರಾಜ್ಯಗಳೂ ವೇತನ ಬಾಕಿ ಉಳಿಸಿಕೊಂಡಿವೆ. ಒಂದುವೇಳೆ, ವೇತನ ತಡವಾದಲ್ಲಿ 16ನೇ ದಿನದ ಬಳಿಕ ದಿನಗೂಲಿಯ ಶೇ.0.05ರಷ್ಟು ಪರಿಹಾರ ನೀಡಬೇಕಾಗುತ್ತದೆ. ಇದನ್ನು ಯಾವ ರಾಜ್ಯಗಳೂ ಮಾಡುತ್ತಿಲ್ಲ. ವೇತನವೇ ಬಾಕಿ ಇರುವಾಗ, ಪರಿಹಾರ ನೀಡಿಕೆಯ ಪ್ರಶ್ನೆ ಎಲ್ಲಿ ಬರುತ್ತದೆ? 2022-23ರಲ್ಲಿ 100 ದಿನ ಕೆಲಸ ಲಭ್ಯವಾದ ಕುಟುಂಬಗಳ ಸಂಖ್ಯೆ ಶೇ.3. ಇದೇ ಅವಧಿಯಲ್ಲಿದ್ದ ವೇತನ ಬಾಕಿ ಪ್ರಮಾಣ 25,800 ಕೋಟಿ ರೂ. 2023-24ರಲ್ಲಿ ಉದ್ಯೋಗ ಕಾರ್ಡ್ ಹೊಂದಿರುವ ಎಲ್ಲರಿಗೂ ಕೆಲಸ ನೀಡಲು 2.7 ಲಕ್ಷ ಕೋಟಿ ರೂ. ಅಗತ್ಯವಿದೆ. ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಮತ್ತು ಎನ್‌ಆರ್‌ಜಿಎ ಸಂಘರ್ಷ್ ಮೋರ್ಚಾ ಪ್ರಕಾರ, 66,000 ಕೋಟಿ ರೂ.ನಿಂದ ಹೆಚ್ಚೆಂದರೆ 20 ದಿನ ಕೆಲಸ ನೀಡಬಹುದಷ್ಟೇ.
ನರೇಗಾ ಅನುದಾನವು ಜನಸಂಖ್ಯೆ-ಒಟ್ಟು ದೇಶಿ ಉತ್ಪನ್ನ(ಜಿಡಿಪಿ)ಕ್ಕೆ ಅನುಗುಣವಾಗಿ ಹಂಚಿಕೆಯಾಗುತ್ತಿಲ್ಲ. 2008-2011ರ ಅವಧಿಯಲ್ಲಿ ಕಾರ್ಯಕ್ರಮಕ್ಕೆ ನೀಡಿದ ಅನುದಾನ ಜಿಡಿಪಿಯ ಶೇ.0.4. ಅರ್ಥಶಾಸ್ತ್ರಜ್ಞರು ಹಾಗೂ ನರೇಗಾ ಕಾರ್ಯಕರ್ತರ ಪ್ರಕಾರ, ಈ ಮೊತ್ತ ಕನಿಷ್ಠ ದುಪ್ಪಟ್ಟು ಅಂದರೆ ಶೇ.1 ಇರಬೇಕು. ಆದರೆ, ಈ ವರ್ಷದ ಅನುದಾನ ಜಿಡಿಪಿಯ ಶೇ.0.2ಕ್ಕಿಂತ ಕಡಿಮೆ ಇದೆ. ಅನುದಾನ ಮಾತ್ರವಲ್ಲದೆ, ಪ್ರತೀ ಕುಟುಂಬಕ್ಕೆ ಲಭ್ಯವಾಗುವ ಅಂದಾಜು ವಾರ್ಷಿಕ ಕೆಲಸದ ದಿನಗಳು ಕೂಡ 50ರಿಂದ 2022-23ರಲ್ಲಿ 43.43ಕ್ಕೆ ಕುಸಿದಿದೆ(ಸರಕಾರದ ಅಂಕಿಅಂಶಗಳ ವಿಶ್ಲೇಷಣೆ-ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ, ಪಿಎಇಜಿ).
ನರೇಗಾದ ನಿಯಮಗಳ ಪ್ರಕಾರ, ಯಂತ್ರಗಳ ಬಳಕೆ ಕೂಡದು. ಆದರೆ, ನಿಯಮ ಉಲ್ಲಂಘಿಸಿ, ಜೆಸಿಬಿಯಂಥ ಭಾರೀ ಯಂತ್ರಗಳನ್ನು ಬಳಸಲಾಗುತ್ತಿದೆ ಎನ್ನುವುದು ವಾಸ್ತವ. ನಿಯಮಕ್ಕೆ ಅನುಗುಣವಾಗಿ ನಡೆದಲ್ಲಿ ನರೇಗಾ, ಹಸಿರು ಕೆಲಸಗಳನ್ನು ಸೃಷ್ಟಿಸುತ್ತದೆ. ಹಸಿರಿನ ವಿಸ್ತರಣೆ, ಇಂಗಾಲದ ಕೊಳಗಳ ಸೃಷ್ಟಿ, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ನಿರ್ಮಾಣ, ನಗರಕ್ಕೆ ವಲಸೆ ತಡೆ ಹಾಗೂ ನಿರುದ್ಯೋಗವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ, ಆರ್ಥಿಕ ಹಿಂಜರಿತ, ಸ್ವಾಭಾವಿಕ ಅವಘಡಗಳು ಹಾಗೂ ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಈ ಯೋಜನೆಗಿದೆ. ಆದರೆ, ಜನಪ್ರತಿನಿಧಿಗಳ ಅವಿವೇಕ ಯೋಜನೆಯ ಧ್ವನಿಯನ್ನು ಸ್ತಬ್ಧಗೊಳಿಸುತ್ತಿದೆ.

ಇನ್ನಿತರ ಕಾರ್ಯಕ್ರಮಗಳಿಗೂ ಅನುದಾನ ಕಡಿತ:
ನರೇಗಾದೊಟ್ಟಿಗೆ ಕೃಷಿ-ಗ್ರಾಮೀಣಾಭಿವೃದ್ಧಿಯಲ್ಲದೆ ಸಬ್ಸಿಡಿ ಯೋಜನೆಗಳಿಗೂ ಅನುದಾನ ಕಡಿತಗೊಂಡಿದೆ. ರೈತರು ಎದುರಿಸುತ್ತಿರುವ ಸರಕಾರದ ಅರೆಬೆಂದ ನೀತಿಗಳು, ಹವಾಮಾನ ಅನಿಶ್ಚಿತತೆ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದೆ ಇರುವುದು ಇತ್ಯಾದಿ ಸಮಸ್ಯೆಗಳಿಗೆ ಆಯವ್ಯಯದಲ್ಲಿ ಯಾವುದೇ ಪರಿಹಾರ ಇದ್ದಂತಿಲ್ಲ. ಬೆಳೆ ವಿಮೆ ನೀತಿ ಅಸಮರ್ಪಕವಾಗಿದ್ದು, ವಿಮೆಗೊಳಪಟ್ಟ ಕ್ಷೇತ್ರ ಒಟ್ಟು ಕೃಷಿ ಭೂಮಿಯ ಶೇ.25ನ್ನು ಮೀರಿಲ್ಲ. ಈ ಸಾಲಿನಲ್ಲಿ ಬೆಳೆ ವಿಮೆಗೆ ಮೀಸಲಿಟ್ಟ ಅನುದಾನ 15,500 ಕೋಟಿಯಿಂದ 13,625 ಕೋಟಿಗೆ ಕುಸಿದಿದೆ. ಕೃಷಿ ಸಾಲಕ್ಕೆ ನೀಡುವ ಸಬ್ಸಿಡಿ ಪ್ರಮಾಣ ಸ್ವಲ್ಪಮಟ್ಟಿಗೆ(22,000 ಕೋಟಿಯಿಂದ 23,000 ಕೋಟಿ ರೂ.) ಹೆಚ್ಚಿದ್ದರೂ, ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ರೈತರಿಗೆ ಸಮಯಕ್ಕೆ ಸರಿಯಾಗಿ/ಅಗತ್ಯವಿರುವಷ್ಟು ಸಾಲ ಸಿಗುತ್ತಿಲ್ಲ. ಇತ್ತೀಚಿನ ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಸಂಸ್ಥೆ(ಎನ್‌ಎಸ್‌ಎಸ್‌ಒ)ಯ ಸಾಲ ಮತ್ತು ಹೂಡಿಕೆ ಸಮೀಕ್ಷೆ ಪ್ರಕಾರ, ದೊಡ್ಡ ಹಿಡುವಳಿದಾರರಿಗೆ ಸುಲಭವಾಗಿ ಸಾಲ ಸಿಗುತ್ತಿದೆ. ಸಣ್ಣ ರೈತರು ಲೇವಾದೇವಿದಾರರನ್ನು ಆಶ್ರಯಿಸುವುದು ತಪ್ಪಿಲ್ಲ.
 ದೀನ್‌ದಯಾಳ್ ಅಂತ್ಯೋದಯ ಅನ್ನ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್(ಡಿಎವೈ ಎನ್‌ಆರ್‌ಎಲ್‌ಎಮ್) ನಡಿ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳನ್ನು ಪುನರ್ ವಿನ್ಯಾಸಗೊಳಿಸುವುದಾಗಿ ಸರಕಾರ ಹೇಳಿಕೊಂಡಿದೆ. ಇದರಿಂದ ಗ್ರಾಮೀಣ ಮಹಿಳೆಯರಿಗೆ ಒಂದಿಷ್ಟು ನೆರವಾಗಬಹುದು. ಆದರೆ, ಸ್ವಸಹಾಯ ಸಂಘಗಳ ಮುಖ್ಯ ಸಮಸ್ಯೆ ಮಾರುಕಟ್ಟೆ ಅಲಭ್ಯತೆ. ಈ ಗುಂಪುಗಳ ಉತ್ಪನ್ನಗಳಿಗೆ ಮಾರುಕಟ್ಟೆ-ಉತ್ತಮ ಬೆಲೆ ಲಭ್ಯವಾಗದಿದ್ದರೆ, ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯನ್ನು ಸ್ಥಗಿತಗೊಳಿಸಿರುವುದರಿಂದ, ಆಹಾರ ಸಬ್ಸಿಡಿ ಅಂದಾಜು 2.89 ಲಕ್ಷ ಕೋಟಿಯಿಂದ 1.97 ಲಕ್ಷ ಕೋಟಿ.ರೂಗೆ ಕಡಿಮೆಯಾಗಿದೆ. ಕೃಷಿ ಲಾಭದಾಯಕವಾಗದೆ ಇರಲು ಬೀಜ, ಗೊಬ್ಬರ, ಕೀಟನಾಶಕ ಮತ್ತಿತರ ಒಳಸುರಿಗಳ ಬೆಲೆ ಹೆಚ್ಚಳ ಮತ್ತು ಕಾರ್ಮಿಕರ ಅಲಭ್ಯತೆ-ಕೂಲಿ ಹೆಚ್ಚಳ ಕಾರಣ. ಗೊಬ್ಬರ ಸಬ್ಸಿಡಿ ಅಂದಾಜು 2.25 ಲಕ್ಷ ಕೋಟಿಯಿಂದ 1.75 ಲಕ್ಷ ಕೋಟಿ ರೂ.ಗೆ ಕಡಿಮೆಯಾಗಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ(ಡಿಬಿಟಿ)ಯಿಂದ ಸಾಕಷ್ಟು ಪ್ರಯೋಜನವಾಗಿತ್ತು. ವರ್ಷಕ್ಕೆ 6,000 ರೂ. ದೊಡ್ಡ ಮೊತ್ತ ಅಲ್ಲದಿದ್ದರೂ, ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆಯಾಗಿತ್ತು. ಈ ಮೊತ್ತ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಯೋಜನೆಗೆ ಅನುದಾನ 66,825 ಕೋಟಿಯಿಂದ 60,000 ಕೋಟಿ ರೂ.ಗೆ ಕುಸಿದಿದೆ.
2014-15ರಿಂದ 2022-2023ರ ಅವಧಿಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇ.3.47 ಇದೆ. ಒಂದು ವೇಳೆ ರೈತರ ಆದಾಯ ದುಪ್ಪಟ್ಟು ಆಗಬೇಕೆಂದಿದ್ದರೆ, ಬೆಳವಣಿಗೆ ದರ ಶೇ. 10.4 ಆಗಬೇಕು. ಆದರೆ, ಅಂಕಿಅಂಶ ಹಾಗೂ ಯೋಜನೆ ಅನುಷ್ಠಾನ ಮಂತ್ರಾಲಯ(ಎಂಒಎಸ್‌ಪಿಐ)ದ ಇತ್ತೀಚಿನ ಅಂಕಿಅಂಶದ ಪ್ರಕಾರ, 2012-2013ರಿಂದ 2018-19ರ ಅವಧಿಯಲ್ಲಿ ರೈತರ ಆದಾಯ ಬೆಳವಣಿಗೆ ದರ ಕೇವಲ ಶೇ.3. ಕೃಷಿಕರ ಆದಾಯ ದುಪ್ಪಟ್ಟು ಆಶಯ ನಿಜವಾದದ್ದೇ ಆದರೆ, ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿತ ತಾರ್ಕಿಕವಲ್ಲ.
   
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಒಂದು ಸಕಾರಾತ್ಮಕ ನಡೆ. ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಸಂಸ್ಥೆ(ಎನ್‌ಎಸ್‌ಎಸ್‌ಒ)ಯ 17ನೇ ಪರಿಸ್ಥಿತಿಯ ಮೌಲ್ಯಮಾಪನ ಸಮೀಕ್ಷೆ (2018-19) ಪ್ರಕಾರ, ಕನಿಷ್ಠ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ ಕಾರ್ಯನೀತಿ ಇರುವ ರಾಜ್ಯಗಳಲ್ಲಿ ರೈತರ ಆದಾಯ ಹೆಚ್ಚು ಇದೆ. ಇಂತಹ ರಾಜ್ಯಗಳ ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಪಂಜಾಬ್, ಹರ್ಯಾಣದ ಭತ್ತಕ್ಕೆ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಅಸ್ಸಾಮ್‌ನ ಭತ್ತಕ್ಕಿಂತ ಹೆಚ್ಚು ಬೆಲೆ ಲಭ್ಯವಾಗಿತ್ತು. ಇದರಿಂದ ಈ ರಾಜ್ಯಗಳ ಕೃಷಿ ಕುಟುಂಬಗಳ ಆದಾಯ ಹೆಚ್ಚು ಇದ್ದಿತ್ತು. ಎಂಎಸ್‌ಪಿಯಡಿ ರೈತರ ಉತ್ಪನ್ನಗಳ ಎತ್ತುವಳಿ ಒಟ್ಟು ಉತ್ಪಾದನೆಗೆ ಹೋಲಿಸಿದರೆ ಕಡಿಮೆಯಿದ್ದರೂ, ವ್ಯವಸ್ಥೆ ಪರಿಣಾಮಕಾರಿಯಾಗಿತ್ತು. ನ್ಯಾಯಾಂಗ ಸೇರಿದಂತೆ ಸಂವಿಧಾನಾತ್ಮಕ ಸಂಸ್ಥೆಗಳಲ್ಲದೆ, ಜನಕಲ್ಯಾಣ ಯೋಜನೆ/ಕಾರ್ಯಕ್ರಮಗಳು ಕೂಡ ಅಳ್ಳಕಗೊಳ್ಳುತ್ತಿವೆ. ಅಪಸವ್ಯಗಳ ಸರಣಿ ಮುಂದುವರಿದಿದೆ. ಇದರ ನೇರ ಪರಿಣಾಮ ಆಗುವುದು ಜನರ ಮೇಲೆ.