ಕಡಬ | ಕಾಡಾನೆ ದಾಳಿ: ಯುವತಿ ಸಹಿತ ಇಬ್ಬರು ಮೃತ್ಯು

Update: 2023-02-20 04:57 GMT

ಕಡಬ, ಫೆ 20: ಇಂದು ಮುಂಜಾನೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ.

ಮೃತರನ್ನು ರಂಜಿತಾ(21) ಹಾಗೂ ರಮೇಶ್ ರೈ(55) ಎಂದು ಗುರುತಿಸಲಾಗಿದೆ. ರಂಜಿತಾ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿದ್ದು, ಇಂದು ಬೆಳಗ್ಗೆ ಎಂದಿನಂತೆ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕರ್ಮೇಣ ಎಂಬಲ್ಲಿ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಅವರ ಬೊಬ್ಬೆ ಕೇಳಿ ಅಲ್ಲೇ ಪಕ್ಕದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಅವರು ರಂಜಿತಾರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅವರ  ಮೇಲೂ ಆನೆ ದಾಳಿ ನಡೆಸಿದೆ. ಹೊಟ್ಟೆ ಭಾಗಕ್ಕೆ ತಿವಿತಕ್ಕೊಳಗಾದ ರಮೇಶ್ ರೈ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

 ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾರನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Similar News