ಕಾಸರಗೋಡು: ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳ ಅಪಹರಣ; ನಾಲ್ವರು ಆರೋಪಿಗಳ ಸೆರೆ

Update: 2023-02-23 13:45 GMT

ಕಾಸರಗೋಡು: ತಂಡವೊಂದು ಚಾಲಕರಿಗೆ ರಿವಾಲ್ವರ್ ತೋರಿಸಿ ಬೆದರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಸಂಜೆ ಮಿಯಪದವಿನಲ್ಲಿ ನಡೆದಿದ್ದು, ಗಂಟೆಗಳ ಅವಧಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ನಾಲ್ವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25), ಸೋಂಕಾಲಿನ ಹೈದರ್ ಅಲಿ (22), ಪೈವಳಿಕೆ ಕಳಾಯಿಯ ಸಯಾಫ್ (22), ಮೀಯಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು. ಮೀಯಪದವಿನ ಅಬ್ದುಲ್ ರಹೀಂ ಸೇರಿದಂತೆ ಇತರ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಪಿಸ್ತೂಲ್, ನಾಲ್ಕು ಸಜೀವ ಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಸಂಜೆ ಆರು ಗಂಟೆಯ ಸುಮಾರಿಗೆ ಮೀಯಪದವು ಬೆಜ್ಜದಲ್ಲಿ  ತಂಡವೊಂದು  ಹಫ್ತಾ ವಸೂಲಿಗಾಗಿ ಎರಡು ಕೆಂಗಲ್ಲು ಲಾರಿ ಚಾಲಕರಿಗೆ ಪಿಸ್ತೂಲ್  ತೋರಿಸಿ  ಬೆದರಿಸಿ ಲಾರಿಯಿಂದ ಕೆಳ ಳಿಸಿ ಮೊಬೈಲ್, ಹಣವನ್ನು ದೋಚಿ ಲಾರಿಗಳನ್ನು ಅಪಹರಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಬೆನ್ನಟ್ಟಿದ್ದಾಗ  ಪೈವಳಿಕೆ ಕೊಮ್ಮಂಗಳ ಬಳಿ ಎರಡು ಲಾರಿಗಳನ್ನು ಬಿಟ್ಟು ಪರಾರಿಯಾಗಲೆತ್ನಿಸಿದಾಗ  ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕಾರನ್ನು ವಶಕ್ಕೆ ತೆಗೆದು ಅದರಲ್ಲಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಸುಮಾರು 25ಕ್ಕೂ ಅಧಿಕ ಪ್ರಕರಣಗಳಲ್ಲಿ ಶಾಮೀಲಾಗಿ ಕಾಫಾ ಕಾಯ್ದೆಯಂತೆ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿದ್ದ ಮೀಯಪದವಿನ ಅಬ್ದುಲ್ ರಹೀಂ ನ ನೇತೃತ್ವದಲ್ಲಿ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Similar News