ಬೆಂಗಳೂರು | ಅತ್ತೆಯನ್ನೇ ಕೊಲೆಗೈದ ಅಳಿಯ: ಪ್ರಕರಣ ದಾಖಲು
ಬೆಂಗಳೂರು, ಫೆ.25: ಚಾಕುವಿನಿಂದ ಇರಿದು ಅತ್ತೆಯನ್ನು ಅಳಿಯ ಕೊಲೆಗೈದಿರುವ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ನಾಗದೇವನಹಳ್ಳಿಯ ಬೃಂದಾವನ ಲೇಔಟ್‍ನಲ್ಲಿಈ ಘಟನೆ ನಡೆದಿದ್ದು, ಏಳರಸಿ (48) ಎಂಬಾಕೆಯನ್ನು ತನ್ನ ಅಳಿಯ ದಿವಾಕರ್ (38) ನಿಂದ ಕೊಲೆಗೈದಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಮೃತ ಏಳರಸಿಯ ಮೊದಲನೆ ಮಗಳು ತಮಿಳರಸಿಯ ಜೊತೆಗೆ ದಿವಾಕರ್ ವಿವಾಹವಾಗಿದ್ದು, ಕೆಜಿಎಫ್ ಬಳಿ ವಾಸವಿದ್ದನು. ಮದುವೆಯಾಗಿ 12 ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹಲವು ಕಾರಣಗಳಿಗೆ ಇಬ್ಬರ ಮಧ್ಯೆ ಗಲಾಟೆಗಳಾಗಿತ್ತು ಎಂದು ತಿಳಿಸಿದರು.
ಇತ್ತೀಚಿಗೆ ಶಿವರಾತ್ರಿ ಹಬ್ಬಕ್ಕೆಂದು ತವರಿಗೆ ತೆರಳಿದ್ದ ಪತ್ನಿ ಮನೆಗೆ ಬರುವುದು ವಿಳಂಬವಾಯಿತು ಎಂಬ ಕಾರಣಕ್ಕೆ ಆತ ಹಾಗೂ ಆತನ ಪತ್ನಿ ಮಧ್ಯೆ ಜಗಳವಾಗಿದೆ. ಪತ್ನಿಯ ಮೇಲೆ ಕೋಪಗೊಂಡಿದ್ದ ದಿವಾಕರ್ ಒಬ್ಬಳು ಮಗಳನ್ನು ಬೆಂಗಳೂರಿನ ಬೃಂದಾವನ ಲೇಔಟ್‍ನಲ್ಲಿರುವ ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಬಂದಿದ್ದನು. ಈ ವೇಳೆ ಮಗಳನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಗಲಾಟೆ ನಡೆದು ದಿವಾಕರ್, ಏಳರಸಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎಂದರು.
ತಡೆಯಲು ಬಂದಿದ್ದ ಆಕೆಯ ಮಗಳ ಕೈಗೆ ಗಾಯವಾಗಿತ್ತು. ತಕ್ಷಣ ಏಳರಸಿಯನ್ನು ಆಸ್ಪತ್ರೆಗೆ ಸಾಗಿಸಲಾದರೂ ರಕ್ತಸ್ರಾವವಾಗಿ ಆಸ್ಪತ್ರೆಗೆ ತಲುಪುವ ಮುನ್ನವೇ ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.