ಬೆಂಗಳೂರು | ಸಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದ ಒಳಮೀಸಲಾತಿ ಹೋರಾಟಗಾರರು: ಪೊಲೀಸರಿಂದ ಅಡ್ಡಿ
‘ಪರಿಶಿಷ್ಟ ಜಾತಿಗಳ ಪಾಲಿಗೆ ಸರಕಾರ ಸತ್ತಿದೆ’ ಎಂದು ಹೋರಾಟಗಾರರ ಆಕ್ರೋಶ
ಬೆಂಗಳೂರು, ಫೆ. 24: ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 77ನೆ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿಗೆ ಬೆಂಕಿ ಹಾಕಲು ಮುಂದಾದಾಗ ದಲಿತ ಹೋರಾಟಗಾರರನ್ನು ಪೊಲೀಸರು ತಡೆದು, ಅಡ್ಡಿಪಡಿಸಿದ ಘಟನೆ ಜರುಗಿತು.
ಬೆಂಗಳೂರು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಹೋರಾಟ ಮುಂದುವರೆದಿದ್ದು, ರವಿವಾರ ದಲಿತ ಹೋರಾಟಗಾರರು, ಚಿಂತಕರು ಪಾಲ್ಗೊಂಡು ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ವಿಚಾರ ಸಂಬಂಧ ಚರ್ಚೆ ನಡೆಸದೆ, ಹೋರಾಟದ ಸ್ಥಳಕ್ಕೂ ಭೇಟಿ ಕೊಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಭಾಗವಾಗಿ ಅಣುಕು ಅಂತ್ಯ ಸಂಸ್ಕಾರ ಮಾಡಲು ಮುಂದಾದ ಹೋರಾಟಗಾರರನ್ನು ಪೊಲೀಸರು ತಡೆದರು.ಇದಕ್ಕೂ ಮೊದಲು ಬಸವರಾಜ ಬೊಮ್ಮಾಯಿ ಪ್ರತಿಕೃತಿಗೆ ಬೆಂಕಿ ಹಾಕಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿದಲ್ಲದೆ, ಹೋರಾಟಗಾರರನ್ನು ತಡೆದರು. ಈ ವೇಳೆ ಹೋರಾಟಗಾರರೊಂದಿಗೆ ಮಾತಿನ ಚಕಮಕಿ ನಡೆಯಿತು.
ಈ ಕುರಿತು ಪ್ರತಿಕ್ರಿಯಿಸಿದ ಹೋರಾಟಗಾರ ಅಂಬಣ್ಣ ಅರೋಲಿಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಕೊನೆಯ ಅಧಿವೇಶನ ಅಂತ್ಯವಾಯಿತು. ಆದರೆ, ಆಳುವ ಪಕ್ಷ, ಕೇಳುವ ಪಕ್ಷ, ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳ ಪಾಲಿಗೆ ಸತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರಾದ ಮಾರಪ್ಪ, ಕೇಶವಮೂರ್ತಿ, ಬಸವರಾಜ ಕವಿತಾಳ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.