‘ವಿಜ್ಞಾನ ಗ್ಯಾಲರಿ' ಶೀಘ್ರವೇ ಲೋಕಾರ್ಪಣೆ: ಸಚಿವ ಡಾ.ಅಶ್ವತ್ಥನಾರಾಯಣ

Update: 2023-02-28 13:13 GMT

ಬೆಂಗಳೂರು, ಫೆ. 28: ‘ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸರಕಾರ ಕೈಗೊಂಡಿರುವ ‘ವಿಜ್ಞಾನ ಗ್ಯಾಲರಿ' ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಗಳವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಮಲ್ಲೇಶ್ವರ 18ನೆ ಕ್ರಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು, ವಿಜ್ಞಾನದ ಬದುಗಿನ ಕುತೂಹಲ ಉತ್ತೇಜಿಸಲು ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳಿಗಾಗಿ 210 ಕೋಟಿ ರೂ.ಗಳನ್ನು ಸರಕಾರ ನೀಡಿದೆ. ಜೊತೆಗೆ, 11 ಕಡೆ ವಿಜ್ಞಾನ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪದವಿ ಪೂರ್ವ ವಿಜ್ಞಾನ ಪ್ರತಿಭೆಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ ಎಂದು ವಿವರಿಸಿದರು.

ಇದೇ ವೇಳೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ‘ಪ್ರಯೋಗ' ಸಂಸ್ಥೆ ಮೂಲಕ ನಾಗರಾಜ ಮತ್ತು ಅವರ ತಂಡದವರು ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸಿದರು. ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸಲು ಬಯಸಿದರೆ ಎಲ್ಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ನುಡಿದರು.

ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ರಾಮನ್ ಎಫೆಕ್ಟ್ ಆವಿಷ್ಕರಿಸಿದ್ದನ್ನು ಗೌರವಿಸಿ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಶ್ರೇಷ್ಠ ವಿಜ್ಞಾನಿಯಾದ ನೊಬೆಲ್ ಪುರಸ್ಕೃತ ಸಿ.ವಿ.ರಾಮನ್ ಮಲ್ಲೇಶ್ವರದಲ್ಲೆ ಇದ್ದವರು. ವಿಜ್ಞಾನಕ್ಕೆ ಬದುಕನ್ನು ಅರ್ಪಿಸಿಕೊಂಡು ಸಮಾಜಕ್ಕೆ ಅವರು ನೀಡಿದ ಕೊಡುಗೆ ನಮಗೆಲ್ಲಾ ಯಾವತ್ತಿಗೂ ಪ್ರೇರಣೆಯಾಗಬೇಕು ಎಂದು ಆಶಿಸಿದರು.

ಇದೇ ವೇಳೆ, ಮಲ್ಲೇಶ್ವರದ 18ನೆ ಕ್ರಾಸ್ ಸರಕಾರಿ ಶಾಲೆಯ ಮಕ್ಕಳು ‘ಪುನೀತ್ ಉಪಗ್ರಹ ವಿನ್ಯಾಸ ಹಾಗೂ ಉಡಾವಣೆ' ಕಾರ್ಯಕ್ರಮದಲ್ಲಿ ತೊಡಗಿರುವುದರ ಬಗ್ಗೆ ಪ್ರಸ್ತಾಪಿಸಿದರು. ವಿವೇಕಾನಂದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜೆ.ಆರ್.ಡಿ.ಟಾಟ ಅವರ ಒಳನೋಟದ ಫಲವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆ ಈಗ ದೇಶದ ಅಗ್ರಮಾನ್ಯ ಸಂಸ್ಥೆಯಾಗಿದೆ. ಈ ಸಂಸ್ಥೆಯು ಬೆಂಗಳೂರು ವಿಜ್ಞಾನ, ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ನಗರಿಯಾಗಿ ಬೆಳೆಯಲು ಹೆಚ್ಚಿನ ಕೊಡುಗೆ ನೀಡಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

Similar News