​ಮಾ.4ರಿಂದ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ

Update: 2023-03-01 13:09 GMT

ಮಂಗಳೂರು, ಮಾ.1: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಅಂಗೀಕೃತ ಮದ್ರಸಗಳ ಪಬ್ಲಿಕ್ ಪರೀಕ್ಷೆ ಮಾ. 4ರಿಂದ ಪ್ರಾರಂಭವಾಗಲಿದೆ.

ಕೇರಳದ ಜೇಲಾರಿ ಕೇಂದ್ರಸ್ಥಾನವಾಗಿ ಕಾರ್ಯಾಚರಿಸುವ ಸಮಸ್ತ ಸಿಲಬಸ್ ಕ್ರಮದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ರಾಷ್ಟ್ರಗಳ 10,596 ಮದ್ರಸಗಳು ನೋಂದಣಿಯಾಗಿದ್ದು, ಭಾರತದಲ್ಲಿ 4,5,6ರಂದು ಮತ್ತು ವಿದೇಶಗಳಲ್ಲಿ ಮಾ.10,11ರಂದು ಪರೀಕ್ಷೆ ನಡೆಯಲಿದೆ.

ಐದು, ಏಳು, ಹತ್ತು,  ಪ್ಲಸ್ ಟು  ತರಗತಿಗಳಿಗಾಗಿ ನಡೆಯುವ  ಪಬ್ಲಿಕ್ ಪರೀಕ್ಷೆಗೆ 7,582 ಸೆಂಟರ್‌ಗಳನ್ನು ನಿಗದಿಪಡಿಸಲಾಗಿದ್ದು, 2,68876 ವಿದ್ಯಾರ್ಥಿಗಳು ಪರೀಕ್ಷಾರ್ಥಿಗಳಾಗಿದ್ದಾರೆ.

ದ.ಕ ಜಿಲ್ಲೆಯಲ್ಲಿ 9,340 ಪರೀಕ್ಷಾರ್ಥಿಗಳು: ಜಿಲ್ಲೆಯ 477 ಕೇಂದ್ರಗಳನ್ನು ಪರೀಕ್ಷೆಗೆ ನಿಗದಿಗೊಳಿಸಲಾಗಿದ್ದು, 5ನೇ ತರಗತಿಯಲ್ಲಿ 4,543 ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ 3,751 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 970 ವಿದ್ಯಾರ್ಥಿಗಳು, ಪ್ಲಸ್ ಟು ತರಗತಿಯಲ್ಲಿ 76 ವಿದ್ಯಾರ್ಥಿಗಳ ಸಹಿತ ಒಟ್ಟು 9,340 ಪರೀಕ್ಷಾರ್ಥಿಗಳು ಇದ್ದಾರೆ.

ಎರಡು ಹೆಚ್ಚುವರಿ ವಿಭಾಗಿಯ ಕೇಂದ್ರಗಳು: ಜಿಲ್ಲೆಯಲ್ಲಿ ಕಳೆದ ಬಾರಿ ಇದ್ದ ಮುಲ್ಕಿ, ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಡಿವಿಷನ್‌ಗಳ ಹೊರತಾಗಿ ದೇರಳಕಟ್ಟೆ ಹಾಗೂ ಸುಳ್ಯ ಎರಡು ಹೆಚ್ಚುವರಿ ವಿಭಾಗೀಯ ಕೇಂದ್ರಗಳನ್ನು ಸೇರಿಸಲಾಗಿದೆ. ಹಾಗಾಗಿ 8 ವಿಭಾಗಿಯ ಕೇಂದ್ರಗಳಾಗಿ ವಿಂಗಡಿಸಲಾಗಿದೆ.

ಮುಲ್ಕಿ ವಿಭಾಗದ ಕೇಂದ್ರಸ್ಥಾನವನ್ನು ಮೂಡುಬಿದಿರೆಯ ಹಂಡೇಲು ಖಾದಿರಿಯ್ಯಾ ಮದ್ರಸಕ್ಕೆ ವರ್ಗಾಯಿಸಲಾ ಗಿದ್ದು, ದೇರಳಕಟ್ಟೆ ವಿಭಾಗಕ್ಕೆ ಹಯಾತುಲ್ ಇಸ್ಲಾಂ ದೇರಳಕಟ್ಟೆ ಟೌನ್ ಮದ್ರಸ ಹಾಗೂ ಸುಳ್ಯ ವಿಭಾಗಕ್ಕೆ ಕಾವು ನೂರುಲ್ ಇಸ್ಲಾಂ  ಮದ್ರಸವನ್ನು ಕೇಂದ್ರ ಸ್ಥಾನವಾಗಿ ನಿಗದಿಪಡಿಸಲಾಗಿದೆ. ಕೆಲವೊಂದು ರೇಂಜ್‌ಗಳ ಡಿವಿಷನ್ ಕೇಂದ್ರಗಳಲ್ಲಿಯೂ ಬದಲಾವಣೆಯಾಗಿದೆ.

ವಿಭಾಗಿಯ ಕೇಂದ್ರಗಳ ಅಧೀಕ್ಷಕರಾಗಿ ಅಬ್ದುಲ್ಲ ಫೈಝಿ ಆದೂರು, ಕಾಸಿಂ ಮುಸ್ಲಿಯಾರ್ ಮಠ, ಉಮರ್ ದಾರಿಮಿ ಸಾಲ್ಮರ, ಹನೀಫ್ ಮುಸ್ಲಿಯಾರ್ ಬೋಳಂತೂರು, ಮುಹಮ್ಮದ್ ದಾರಿಮಿ ಚೆಂಗಳ, ಫಾರೂಕ್ ದಾರಿಮಿ ತೆಕ್ಕಾರು, ಹಮೀದ್ ದಾರಿಮಿ ಕಕ್ಕಿಂಜೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯನಿರ್ವಹಿಸಲಿದ್ದಾರೆ.

ಸ್ಪೆಷಲ್ ಪರೀಕ್ಷೆ: ಮಾ.4ರಂದು ನಡೆಯುವ ಪರೀಕ್ಷೆಯಲ್ಲಿ ಕಾರಣಾಂತರದಿಂದ ಭಾಗವಹಿಸಲಾಗದ ವಿದ್ಯಾರ್ಥಿ ಗಳಿಗೆ ಮಾ.12ರಂದು ಆಯಾ ಮದ್ರಸ  ಪರೀಕ್ಷಾ ಸೆಂಟರಗಳಲ್ಲಿಯೇ  ಸ್ಪೆಷಲ್  ಪರೀಕ್ಷೆಯನ್ನು ನಡೆಸಲಾಗುವುದು.

ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ: ಮಾ.3ರಂದು ಅಪರಾಹ್ನ 3ಕ್ಕೆ ವಿಭಾಗಿಯ ಕೇಂದ್ರಗಳಲ್ಲಿ ಆಯಾ ವ್ಯಾಪ್ತಿಯ ಪರೀಕ್ಷೆ ಮೇಲ್ವಿಚಾರಕರಿಗೆ ಸಮಸ್ತ ಮುಫತ್ತಿಶುಗಳ ನೇತೃತ್ವದಲ್ಲಿ ಮಾಹಿತಿ ಶಿಬಿರ ಮತ್ತು ಪರೀಕ್ಷಾ ಪರಿಕರಗಳ ವಿತರಣೆ ನಡೆಯಲಿದೆ.

ಮೇಲ್ವಿಚಾರಕರಿಗೆ ಪ್ರತ್ಯೇಕ ಬಾರ್ ಕೋಡ್‌ಗಳಿರುವ ಗುರುತಿನ ಚೀಟಿಯನ್ನು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮುಖಾಂತರ ನೀಡಲಾಗಿದೆ. ಸೇವೆಯಲ್ಲಿರುವ ಮದ್ರಸ ಆಡಳಿತ ಸಮಿತಿಯವರಿಂದ ದೃಢೀಕರಿಸಿ ಪ್ರಸ್ತುತ ಐಡೆಂಟಿಟಿ ಕಾರ್ಡಿನೊಂದಿಗೆ ನಿಗದಿತ ಸಮಯಕ್ಕೆ ಆಯಾ ಡಿವಿಶನ್ ಕೇಂದ್ರಗಳಲ್ಲಿ  ಹಾಜರಿರಬೇಕು ಎಂದು ಸೂಚಿಸಲಾಗಿದೆ.

ಮೌಲ್ಯಮಾಪನ: ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮಾ.6ರಂದು ಪ್ರಾರಂಭಗೊಳ್ಳಲಿದ್ದು ಎಂಟು ಕೇಂದ್ರಗಳನ್ನು ಅದಕ್ಕಾಗಿ ಸಜ್ಜುಗೊಳಿಸಲಾಗಿದೆ. ಆತೂರು ತದ್‌ಬೀರುಲ್ ಇಸ್ಲಾಂ ಮದ್ರಸವನ್ನು ಈ ಬಾರಿ ಮೌಲ್ಯಮಾಪನದ ನೂತನ ಕೇಂದ್ರವಾಗಿ ನಿಗದಿಗೊಳಿಸಲಾಗಿದೆ.

ಪರೀಕ್ಷಾ ಸಮಯದಲ್ಲಿ ಆಯಾ ಆಡಳಿತ ಸಮಿತಿ ಪ್ರತಿನಿಧಿಗಳು ತಮ್ಮ ಮದ್ರಸ ಕೊಠಡಿಯಲ್ಲಿ ಹಾಜರಿದ್ದು ಪರೀಕ್ಷೆಗಳ ಸುಗಮಕ್ಕೆ ಎಲ್ಲಾ ಅಗತ್ಯವಾದ ಕಾರ್ಯಗಳನ್ನು ಮಾಡಿಕೊಂಡು ಪರೀಕ್ಷಾ ಮೇಲ್ವಿಚಾರಕರಿಗೆ ಸಹ ಕಾರ ನೀಡಬೇಕೆಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News