ಬೆಂಗಳೂರು: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Update: 2023-03-02 12:29 GMT

ಬೆಂಗಳೂರು,ಮಾ.2: ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿದ ಪಾಪಿ ಪತಿಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಣನಕುಂಟೆಯ ವಡ್ಡರಪಾಳ್ಯದಲ್ಲಿ ವರದಿಯಾಗಿದೆ.

ಪತ್ನಿ ವಿಜಯ (28), ಮಕ್ಕಳಾದ ನಿಶಾ (7) ಹಾಗೂ ದೀಕ್ಷಾ (5) ಮೃತ ದುರ್ದೈವಿಗಳಾದರೆ, ಆತ್ಮಹತ್ಯೆಗೆ ಯತ್ನಿಸಿದ ನಾಗೇಂದ್ರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ವಡ್ಡರಪಾಳ್ಯದ ನಾಗೇಂದ್ರ ಕ್ಯಾನ್ಸರ್ ಪೀಡಿತನಾಗಿದ್ದು, ನಿನ್ನೆ ರಾತ್ರಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ಊಟದಲ್ಲಿ ತಿಗಣೆ ಔಷಧಿ ಹಾಗೂ ಇಲಿ ಔಷಧಿ ಬೆರೆಸಿದ್ದ. ಬಳಿಕ ವಿಷವನ್ನು ತಾನೂ ಕುಡಿದಿದ್ದ. ಬೆಳಗ್ಗೆ ವೇಳೆಗೆ ನಾಗೇಂದ್ರ ಪತ್ನಿ ಹಾಗೂ ಮಕ್ಕಳು ಸಾವನ್ನಪ್ಪಿದ್ದು, ತಾನು ಮಾತ್ರ ಬದುಕುಳಿದಿದ್ದ. ಇದರಿಂದ ನಾಗೇಂದ್ರ ಮತ್ತೆ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ವಿಜಯ ತಾಯಿ ಸಾಕಮ್ಮ, ಕಳೆದ 8 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ನಾಗೇಂದ್ರನಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾದ ಬಳಿಕ ಆತ ಕೆಲಸ ಬಿಟ್ಟಿದ್ದ. ಪತ್ನಿ ವಿಜಯ ಮೆಡಿಕಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಕೆಲಸ ಬಿಟ್ಟಿದ್ದ ನಾಗೇಂದ್ರ ಖರ್ಚಿಗೆ ಹಣ ನೀಡುವಂತೆ ಪತ್ನಿಗೆ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ನಾಗೇಂದ್ರ ಮಗಳ ಕೈ ಸುಟ್ಟು ವಿಕೃತಿ ಮೆರೆದಿದ್ದ. ಪತಿಯ ಕಿರುಕುಳಕ್ಕೆ ರೋಸಿ ಹೋಗಿದ್ದ ವಿಜಯ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಳು. ಇತ್ತೀಚೆಗೆ ಆತನ ಕಿರುಕುಳ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೆಂಡತಿ ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ವಿಜಯ ತಾಯಿ ಸಾಕಮ್ಮ ಆರೋಪಿಸಿದ್ದಾರೆ. 

ಘಟನೆ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

Similar News