ಬೆಂಗಳೂರು: ತಾಯಿ ಮೃತದೇಹದೊಂದಿಗೆ 2 ದಿನ ಕಳೆದ ಬಾಲಕ

Update: 2023-03-02 13:56 GMT

ಬೆಂಗಳೂರು, ಮಾ.2: ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ 14 ವರ್ಷದ ಬಾಲಕ ಮೃತದೇಹದೊಂದಿಗೆ ಎರಡು ದಿನ ಕಳೆದಿರುವ ಮನಕಲಕುವ ಘಟನೆ ವರದಿಯಾಗಿದೆ.

ಗಂಗಾ ನಗರದಲ್ಲಿ ವಾಸವಿದ್ದ ಅಣ್ಣಮ್ಮಾ(40) ಎಂಬಾಕೆ ಮೃತ ತಾಯಿಯಾಗಿದ್ದು, ಫೆ.25 ರಂದು ರಕ್ತದೊತ್ತಡ ಮಧುಮೇಹ ಕಾಯಿಲೆಯಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. 

ತಾಯಿ ಸಾವನ್ನಪ್ಪಿರುವ ಬಗ್ಗೆ ಬಾಲಕನಿಗೆ ಕಿಂಚಿತ್ತೂ ಗೊತ್ತಾಗಲಿಲ್ಲ. ಹೀಗಾಗಿ, ಎರಡು ದಿನ ಮೃತದೇಹದ ಜತೆಗೇ ಸಮಯ ಕಳೆದಿದ್ದಾನೆ. ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಅಡುಗೆ ಮಾಡಿಲ್ಲವೆಂದು ಹೇಳಿ ಊಟ ಮಾಡಿಕೊಂಡು ಬಂದು ಮತ್ತೆ ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಫೆ.28 ರಂದು ಮೃತದೇಹದಿಂದ ದುರ್ವಾಸನೆ ಹೊರಬರಲು ಶುರುವಾಗಿದೆ. ಆನಂತರ, ಈ ಬಗ್ಗೆ ಬಾಲಕ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಆರ್.ಟಿ.ನಗರ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ, ಒಂದು ವರ್ಷದ ಹಿಂದೆಯಷ್ಟೆ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮಾ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

Similar News