ಮೆಟ್ರೋ ಸುರಂಗ ಕಾಮಗಾರಿ | ಮತ್ತೊಂದು ಕಡೆ ಕುಸಿತ, ಜನರ ಓಡಾಟ ನಿಷೇಧ
Update: 2023-03-02 15:09 GMT
ಬೆಂಗಳೂರು, ಮಾ.2: ಮೆಟ್ರೋ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದಿದ್ದು, ಮಸೀದಿಯೊಂದರ ಪಕ್ಕದಲ್ಲಿ ಬಿರುಕು ಬಿಟ್ಟಿರುವ ಘಟನೆ ನಗರದ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ನಾಗವಾರ ಸಮೀಪ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದರು. ಈ ದುರಂತದಿಂದ ಕಂಗೆಟ್ಟಿರುವ ಜನರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಸುರಂಗ ಕೊರೆಯುತ್ತಿರುವ ಜಾಗದಲ್ಲಿ ಈಗ ರಸ್ತೆ ಕುಸಿದಿದೆ.
ಕಬ್ಬಿಣದ ರಾಡ್‍ಗಳನ್ನು ಮಸೀದಿ ಗೋಡೆಗೆ ಒರಗಿಸಲಾಗಿದ್ದು, ಗೋಡೆ ಬೀಳದಂತೆ ನಿಲ್ಲಿಸಲಾಗಿದೆ. ಮಾತ್ರವಲ್ಲದೆ ಈ ಭಾಗದ ರಸ್ತೆಯನ್ನೂ ಬಂದ್ ಮಾಡಲಾಗಿದ್ದು, ಜನರ ಓಡಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‍ಸಿಎಲ್‍ನ ಸಿಪಿಆರ್‍ಓ ಯಶವಂತ್, ಈ ದುರಂತದಲ್ಲಿ ಯಾವ ಅಧಿಕಾರಿ ಹಾಗೂ ಸಿಬ್ಬಂದಿ ಬೇಜವಾಬ್ದಾರಿ ಇಲ್ಲ. ಮಣ್ಣು ಗಟ್ಟಿ ಇಲ್ಲದ ಕಾರಣ ಹೀಗಾಗಿದೆ ಎಂದು ತಿಳಿಸಿದ್ದಾರೆ.