'ನಮ್ಮ ಮೆಟ್ರೋ' ಕ್ಯೂಆರ್ ಟಿಕೆಟ್ ಮೇಲೆ ಶೇ.50 ಕ್ಯಾಶ್‍ಬ್ಯಾಕ್

Update: 2023-03-02 17:03 GMT

ಬೆಂಗಳೂರು, ಮಾ. 2: ಸರದಿ ಸಾಲಿನಲ್ಲಿ (ಕ್ಯೂ) ನಿಂತು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಮೆಟ್ರೋ ಕ್ಯೂಆರ್ ಟಿಕೆಟ್ ಮೇಲೆ ಶೇ.50ರಷ್ಟು ಕ್ಯಾಶ್‍ಬ್ಯಾಕ್ ಘೋಷಿಸಿದೆ.

ಈ ರಿಯಾಯಿತಿ ಪಡೆಯಲು ನಮ್ಮ ಮೆಟ್ರೋ ಪ್ರಯಾಣಿಕರು ಪೇಟಿಎಂ ಸೂಪರ್ ಆಪ್ ಬಳಸಿ ಕ್ಯೂಆರ್ ಟಿಕೆಟ್ ಖರೀದಿಸಬೇಕು. ಪ್ರಯಾಣವನ್ನು ಇನ್ನಷ್ಟು ಸರಾಗಗೊಳಿಸುವ ಪ್ರಯತ್ನದ ಭಾಗವಾಗಿ ಮೆಟ್ರೋ ಪ್ರಯಾಣಿಕರು 9 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೆಟ್ರೋ ಕ್ಯೂಆರ್ ಟಿಕೆಟ್‍ಗಳನ್ನು ಖರೀದಿಸಿದರೆ 15 ರೂ.ವರೆಗೆ ಕ್ಯಾಶ್‍ಬ್ಯಾಕ್ ಪಡೆಯುತ್ತಾರೆ.

ಬೆಂಗಳೂರು ಮೆಟ್ರೋ ರೈಲಿನ ಮೂಲಕ ಪ್ರಯಾಣಿಸುವಾಗ ಜನರು ಹೆಚ್ಚು ಉಳಿತಾಯ ಮಾಡಲು ಕ್ಯೂಆರ್ ಕೋಡ್ ಪ್ರವರ್ತಕ ಹೆಚ್ಚು ಸಹಕಾರಿ. ಅಲ್ಲದೆ, ಮೆಟ್ರೋ ಪ್ರಯಾಣಿಕರು ಈಗ ತಮ್ಮ ಮೆಟ್ರೋ ಕಾರ್ಡ್‍ಗಳನ್ನು ರೀಚಾರ್ಜ್ ಮಾಡಲು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಶೇ.50 ಕ್ಯಾಶ್‍ಬ್ಯಾಕ್‍ಗೆ ಅರ್ಹರಾಗಲು ಮಾ. 17ರ ಮೊದಲು ಮೆಟ್ರೋ ಕ್ಯೂಆರ್ ಟಿಕೆಟ್ ಖರೀದಿಸಬೇಕಾಗುತ್ತದೆ.

ಬಿಎಂಆರ್‍ಸಿಎಲ್ ಈಗಾಗಲೇ ವಾಟ್‍ಆಪ್‍ನಲ್ಲಿ ಕ್ಯೂಆರ್ ಟಿಕೆಟಿಂಗ್ ಸೇವೆಯನ್ನು ಸಕ್ರಿಯಗೊಳಿಸಿದೆ. ಇದು ಪ್ರಯಾಣಿಕರು ತಮ್ಮ ಏಕ-ಪ್ರಯಾಣದ ಸಾರಿಗೆ ಟಿಕೆಟ್‍ಗಳನ್ನು ಖರೀದಿಸಲು, ಮೆಟ್ರೋ ಪ್ರಯಾಣದ ಪಾಸ್‍ಗಳನ್ನು ರೀಚಾರ್ಜ್ ಮಾಡಲು, ಸಾರಿಗೆ ವೇಳಾಪಟ್ಟಿಗಳನ್ನು ವೀಕ್ಷಿಸಲು ಮತ್ತು ನವೀಕರಿಸಿದ ದರ ಕೋಷ್ಟಕಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಪೇಟಿಎಂ ಆಪ್ ಬಳಸಿ ಯುಪಿಐ, ವ್ಯಾಲೆಟ್, ಪೋಸ್ಟ್ ಪೇಯ್ಡ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು ಮತ್ತು ನೆಟ್ ಬ್ಯಾಂಕಿಂಗ್‍ನಿಂದ ಪಾವತಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Similar News