ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಯಡಿ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ: ಸಚಿವ ಡಾ.ಕೆ.ಸುಧಾಕರ್
''5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ''
ಬೆಂಗಳೂರು, ಮಾ. 2: ರಾಜ್ಯ ಸರಕಾರದ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಯಡಿ, ಇದೇ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂತಹ ಕ್ರಮಗಳ ಮೂಲಕ ಕಿವಿಯ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಪ್ರತಿ ವರ್ಷ ಮಾ.3ರಂದು ವಿಶ್ವ ಶ್ರವಣ ದಿನ ಆಚರಿಸುತ್ತಿದ್ದು, ಈ ವರ್ಷ ‘ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ, ಬನ್ನಿ ವಾಸ್ತವವಾಗಿಸೋಣ’ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲ ಆರೋಗ್ಯ ಕಾರ್ಯಕರ್ತೆಯರಿಗೆ, ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಕಿವಿಯ ಆರೈಕೆ ಹಾಗೂ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ತರಲಾಗಿದೆ. ಇದರಲ್ಲಿ, ಈ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯಾರ್ ಶಸ್ತ್ರಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಾದ್ಯಂತ 430 ದಶಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ. ರಾಜ್ಯದಲ್ಲಿ 2008-09 ರಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ 5 ವರ್ಷಗಳಲ್ಲಿ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ವಿಭಾಗದಿಂದ, 2,00,305 ಶ್ರವಣ ದೋಷವುಳ್ಳವರನ್ನು ಹಾಗೂ 35,418 ಗಂಭೀರ ಶ್ರವಣ ದೋಷವುಳ್ಳವರನ್ನು ಗುರುತಿಸಲಾಗಿದೆ. 5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.
ಈ ವಿಶ್ವ ಶ್ರವಣ ದಿನದಂದು, ಎಲ್ಲ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ ಚಿಕಿತ್ಸೆ ಒದಗಿಸಲಾಗುವುದು. 6 ವರ್ಷದೊಳಗಿನ ಮಕ್ಕಳಲ್ಲಿ ಎರಡು ಕಿವಿಗಳಲ್ಲಿ ಗಂಭೀರ ಸ್ವರೂಪದ ಶ್ರವಣ ದೋಷಗಳನ್ನು ಗುರುತಿಸಿ ಕಾಕ್ಲಿಯಾರ್ ಇಂಪ್ಲಾಂಟ್ ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳಿಂದ ಶ್ರವಣ ಸಾಧನಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಪ್ರಕಟನೆಯಲ್ಲಿ ವಿವರಿಸಿದ್ದಾರೆ.