BBMP Budget-2023: ಬೆಂಗಳೂರಿನಲ್ಲಿ ಹೊಸದಾಗಿ 75 ಜಂಕ್ಷನ್, ಮೇಲ್ಸೇತುವೆ ನಿರ್ಮಾಣ

Update: 2023-03-02 18:43 GMT

ಬೆಂಗಳೂರು, ಮಾ.2: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿಯೂ ನಗರದ ಬಹುತೇಕ ಕಡೆಗಳಲ್ಲಿ ಹೊಸದಾಗಿ 75 ಜಂಕ್ಷನ್, ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡುವುದಾಗಿ ಆಯವ್ಯಯದಲ್ಲಿ ಪ್ರಕಟಿಸಿದೆ.

ವಿವಿಧ ಕಡೆಯ ಜಂಕ್ಷನ್‍ಗಳಲ್ಲಿ ನಿಧಾನಗತಿಯ ಸಂಚಾರ ವೇಗವನ್ನು ಚುರುಕುಗೊಳಿಸಲು ಬೆಂಗಳೂರಿನ 75 ಪ್ರಮುಖ ಜಂಕ್ಷನ್‍ಗಳ ಅಭಿವೃದ್ಧಿಗೆ 150 ಕೋಟಿ ರೂ., ಅನುದಾನ ನೀಡಲಾಗಿದೆ. ಜತೆಗೆ, ರಸ್ತೆ ಅಗಲೀಕರಣಕ್ಕೂ ಮುಂದಾಗಿದ್ದು, ಒಳಾಂಗಣ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಕ್ಕೆ 5 ಕೋಟಿ ರೂ. ಮೀಸಲಿಡಲಾಗಿದೆ.

ಹಾಗೇ ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್‍ಗಾಗಿ 70 ಕೋಟಿ ರೂ. ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಕುರುಬರಹಳ್ಳಿ-ಮಹಾಲಕ್ಷ್ಮೀಲೇಔಟ್, ಆರ್‍ಆರ್ ನಗರ ಹಾಗೂ ಮಾಗಡಿ ರಸ್ತೆವರೆಗಿನ ತಡೆರಹಿತ ಕಾರಿಡಾರ್‍ಗಾಗಿ 190 ಕೋಟಿ ರೂ. ಯಶವಂತಪುರ ರೈಲ್ವೇ ನಿಲ್ದಾಣ ಬಳಿ ಕೆಳ ಸೇತುವೆಗಾಗಿ 125 ಕೋಟಿ ರೂ. 

ಬನ್ನೇರುಘಟ್ಟ ರಸ್ತೆಯ ಅಗಲೀಕರಣಕ್ಕೆ 70 ಕೋಟಿ ರೂ., ವಿಲ್ಸನ್ ಗಾರ್ಡನ್ ಮೇಲ್ಸೆತುವೆ ಗ್ರೇಡ್ ಸೆಪರೇಟರ್‍ಗೆ 85 ಕೋಟಿ ರೂ.,ಯಲಹಂಕ ಮೇಲ್ಸುತುವೆ ಗ್ರೇಡ್ ಸೆಪರೇಟರ್‍ಗೆ 60 ಕೋಟಿ ರೂ., ಹೂಡಿ ಜಂಕ್ಷನ್, ಐಟಿಪಿಎಲ್ ಬಿಗ್-ಬಜಾರ್ ಜಂಕ್ಷನ್ ಹಾಗೂ ಹೋಫ್-ಫಾರಂ ಜಂಕ್ಷನ್‍ಗಳಲ್ಲಿನ ಮೇಲ್ಸೇತುವೆಗೆ 124 ಕೋಟಿ ರೂ., ಮಿನರ್ವ್ ಜಂಕ್ಷನ್ ಗ್ರೇಡ್ ಸೆಪೆರೇಟರ್‍ಗೆ 137 ಕೋಟಿ ರೂ., ಹಳೆ-ಮದ್ರಾಸ್ ರಸ್ತೆಯ ಸುರಂಜನ್ ದಾಸ್ ಜಂಕ್ಷನ್‍ನಲ್ಲಿಯ ಮೇಲ್ಸೇತುವೆಗೆ 104 ಕೋಟಿ ರೂ. ಅನುದಾನ ನೀಡಲಾಗಿದೆ.

ಸದ್ಯ ಬೆಂಗಳೂರಿನಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು ಈ ವರ್ಷದಲ್ಲಿ ಮತ್ತೆ ನಾಲ್ಕು ಮೇಲ್ಸೇತುವೆಗಳು ಮತ್ತು ನಾಲ್ಕು ಕೆಳಸೇತುವೆಗಳು ಸೇರ್ಪಡೆಯಾಗಲಿವೆ. ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಈ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ ರೂ., ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆ ಮತ್ತು ಟೆಂಡರ್ ಶ್ಯೂರ್ ಅಡಿಯಲ್ಲಿ ಮತ್ತುಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ರಸ್ತೆಗಳ ನಿರ್ವಹಣೆಗೆ 20 ಕೋಟಿಗಳನ್ನು ಮೀಸಲಿರಿಸಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಪ್ರಕಟಿಸಿದರು.

Similar News