ಬಜ್ಪೆ: ಪಾತ್ರೆ ತೊಳೆಯುವ ವಿಚಾರದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Update: 2023-03-08 06:00 GMT

ಮಂಗಳೂರು, ಮಾ.8: ಅಡುಗೆ ಮತ್ತು ಪಾತ್ರೆ ತೊಳೆಯುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ನಡದಿದೆ.

ಮೃತರನ್ನು ಕೂಲಿ ಕಾರ್ಮಿಕ, ಉತ್ತರ ಪ್ರದೇಶ ರಾಜ್ಯದ ಸಂಜಯ್(28) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಸೋಹಾನ್ ಯಾದವ್ (19) ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರು ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು.

ಮಾ.5ರಂದು ರಾತ್ರಿ ಸಂಜಯ್ ಮತ್ತು ಸೋಹಾನ್ ನಡುವೆ ಅಡುಗೆ ಮತ್ತು ತಟ್ಟೆ, ಪಾತ್ರೆ ತೊಳೆಯುವ ವಿಚಾರದಲ್ಲಿ  ವಾಗ್ವಾದ ನಡೆದಿದೆ. ಈ ವೇಳೆ ಸಂಜಯ್ ನನ್ನು ಸೋಹನ್ ಯಾದವ್ ಬಲವಾಗಿ ಹಿಂದಕ್ಕೆ ತಳ್ಳಿದ್ದಾನೆ. ಇದರಿಂದ ಕೆಳಗೆ ಬಿದ್ದ ಸಂಜಯ್ ತಲೆಗೆ ಗಂಭೀರ ಗಾಯವಾಗಿತ್ತು.  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಾ..6ರಂದು ಮುಂಜಾನೆ ಅವರು ಕೊನೆಯುಸಿರೆಳೆದಿರುವುದಾಗಿ ಬಜ್ಪೆ ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಸೋಹನ್‌ನನ್ನು ಬಜ್ಪೆ ಪೊಲೀಸರು ಮಂಗಳೂರು ರೈಲು ನಿಲ್ದಾಣದ ಬಳಿ ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ | ದಿಕ್ಕು ತಪ್ಪಿ ಅರಣ್ಯ ಸೇರಿದ 80ರ ಹರೆಯದ ವೃದ್ಧೆ 3 ದಿನಗಳ ಬಳಿಕ ಪತ್ತೆ

Similar News