ಸರಕಾರ ಶೂನ್ಯ ಬಾಕಿ ದೃಢೀಕರಣ ಕೇಳಿರುವುದರ ಹಿಂದೆ ಶಾಲೆಗಳನ್ನು ಮುಚ್ಚುವ ಹುನ್ನಾರ: ನಿರಂಜನಾರಾಧ್ಯ.ವಿ.ಪಿ.

Update: 2023-03-13 15:33 GMT

ಬೆಂಗಳೂರು, ಮಾ.13: ಶಾಲೆಗಳಲ್ಲಿನ ಖಾತೆಯಲ್ಲಿರುವ ಎಲ್ಲ ಸಂಚಿತ ನಿಧಿಯ ಹಣವನ್ನು ರಾಜ್ಯ ಕಚೇರಿಗೆ ಹಿಂದಿರುಗಿಸಿ ಶೂನ್ಯ ಬಾಕಿ ದೃಢೀಕರಣವನ್ನು ಕೇಳಿರುವುದರ ಹಿಂದೆ ಶಾಲೆಗಳನ್ನು ‘ಶೂನ್ಯ ಬ್ಯಾಲೆನ್ಸ್ ಶಾಲೆಗಳನ್ನಾಗಿಸಿ’ ಕ್ರಮೇಣವಾಗಿ ಮುಚ್ಚುವ ಹುನ್ನಾರವಿದೆ ಎಂದು ಶಿಕ್ಷಣತಜ್ಞ ನಿರಂಜನಾರಾಧ್ಯ.ವಿ.ಪಿ. ತಿಳಿಸಿದ್ದಾರೆ. 

ಸಮಗ್ರ ಶಿಕ್ಷಣ ಅಭಿಯಾನದ ಮುಖ್ಯ ಲೆಕ್ಕಾಧಿಕಾರಿಗಳು ಪತ್ರವೊಂದನ್ನು ಬರೆದು, ಶಾಲೆಗಳ  ಖಾತೆಯಲ್ಲಿರುವ  ಬ್ಯಾಂಕ್ ಬಡ್ಡಿಯ ಮೊತ್ತವನ್ನೂ ಒಳಗೊಂಡಂತೆ  ಉಳಿದಿರುವ ಎಲ್ಲ ಅನುದಾನಗಳನ್ನು ಕೂಡಲೇ  ಸಮಗ್ರ ಶಿಕ್ಷಣ ಅಭಿಯಾನ ಕಛೇರಿಗೆ  ಹಿಂದಿರುಗಿಸುವಂತೆ ಸೂಚಿಸಿರುವ ನಿರ್ಧಾರವನ್ನು ಅವರು ಖಂಡಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿನ ಖಾತೆಯಲ್ಲಿನ ಹಣ ಆಯಾ ಶಾಲೆಗಳ ಶೈಕ್ಷಣಿಕ ಹಾಗು ಶೈಕ್ಷಣೇತರ ಚಟುವಟಿಕೆಗಳಿಗೆ ಬಳಕೆಯಾಗಬೇಕು. ಶಾಲೆಗಳಲ್ಲಿರುವ ಕನಿಷ್ಠದಲ್ಲಿನ ಕನಿಷ್ಠ  ಹಣವನ್ನು ಹಿಂದಕ್ಕೆ ಪಡೆಯುವ ದಾರಿದ್ರ್ಯ ಪರಿಸ್ಥಿತಿ ಸರಕಾರಕ್ಕೆ ಬರಬಾರದಿತ್ತು. ಶಾಲೆಗಳಲ್ಲಿನ ಅತ್ಯಲ್ಪ ಹಣವನ್ನು ಬರಿದು ಮಾಡಿ,  ಬಡ ಮಕ್ಕಳ ಶಿಕ್ಷಣವನ್ನು ಬೀದಿಪಾಲು ಮಾಡಲು ಹೊರಟಿರುವುದು ಖಂಡನೀಯ ಎಂದು ಅವರು ಟೀಕಿಸಿದ್ದಾರೆ. 

ಅಧಿಕಾರಿಗಳು ಶಾಲೆಯ ಮುಖ್ಯ ಶಿಕ್ಷಕರಿಗೆ ಮತ್ತು ಎಸ್‍ಡಿಎಮ್‍ಸಿಗಳಿಗೆ ಜೀರೊ ಬ್ಯಾಲೆನ್ಸ್ ಮಾಡಿ ಎಂದು ಪದೇ ಪದೇ ಮೌಖಿಕವಾಗಿ ಒತ್ತಾಯಿಸುತ್ತಿರುವುದರ ಹುನ್ನಾರವಾದರು ಏನು? ಹತ್ತಾರು ವರ್ಷಗಳ ಕಾಲ ಬಂದ ಉಳಿತಾಯ ಬಡ್ಡಿ ಸಂಚಿತ ನಿಧಿಯ ಹಣವನ್ನು ಶಾಲೆಗಳು ರಾಜ್ಯಕ್ಕೆ ಹಿಂದಿರುಗಿಸುವ ಔಚಿತ್ಯವಾದರು ಏನು ಎಂದು ಅವರು ಪ್ರಶ್ನಿಸಿದ್ದಾರೆ.

Similar News