ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆ: ವಿ.ಸೋಮಣ್ಣ ಸ್ಪಷ್ಟನೆ

ಡಿಕೆಶಿ ಜೊತೆಗಿನ ವೈರಲ್ ಫೋಟೋ ಬಗ್ಗೆ ಸಚಿವರ ಪ್ರತಿಕ್ರಿಯೆ ಏನು?

Update: 2023-03-14 13:39 GMT

ಬೆಂಗಳೂರು, ಮಾ.14: ನಾನು ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಇನ್ನು ಮುಂದೆ ಮುಖ್ಯಮಂತ್ರಿಗಳಿಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ನಗರದ ಕಾವೇರಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಉತ್ತಮ ಮಾರ್ಗದಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲಿನ ನಮ್ಮ ಗೊಂದಲಗಳಿಗೆ ಇತಿಶ್ರೀ ಹಾಡೋಣ. ಪಕ್ಷ ಹೇಳಿದರೆ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ತಪ್ಪನ್ನು ಯಾರೇ ಮಾಡಿದ್ದರೂ ಅದು ತಪ್ಪೇ. ನನ್ನ ಮಗ ಏನೋ ಆಗಬೇಕು ಎನ್ನುವ ಆಸೆ ನನಗಿಲ್ಲ. ಮಗ ಏನಾದರೂ ಪಕ್ಷದ ವಿರುದ್ಧ ನಡೆದುಕೊಂಡಿದ್ದರೆ ಪಕ್ಷ ಅವನ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಿ. ನಾನಾಗಲಿ, ನನ್ನ ಪುತ್ರನಾಗಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವುದಿಲ್ಲ ಎಂದು ಅವರು ತಿಳಿಸಿದರು.

 ''ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾವುದೋ‌ ಕಾಲದಲ್ಲಿನ ಫೋಟೋ ತಗೊಂಡು, ಏನೋ ಹಾಕಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ನಾನು ಬಿಜೆಪಿಯ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ, ನನಗೆ ನನ್ನ ಇತಿಮಿತಿ ಗೊತ್ತಿದೆ, ಎಷ್ಟು ಗೌರವವಾಗಿ ನಡೆದುಕೊಳ್ಳಬೇಕು ಗೊತ್ತಿದೆ'' ಎಂದು ಹೇಳಿದರು. 

ಈಗ ವಿಜಯಸಂಕಲ್ಪ ಯಾತ್ರೆ ಶುರುವಾಗಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಕೃಪೆ ನಮ್ಮ ಮೇಲಿದ್ದು, ಚುನಾವಣೆಯಲ್ಲಿ ಬಹುಮತ ಸಾಧಿಸುವುದು ಖಚಿತ ಎಂದು ತಿಳಿಸಿದರು.

ವಿ.ಸೋಮಣ್ಣ ಭಾವುಕ: 

'ನಾನು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿದ್ದೇನೆ. ದಿನವಿಡೀ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿನಲ್ಲಿ ಓದಿದೆ. 16 ವರ್ಷಗಳ ಕಾಲ ಆರು ಅಡಿಯಿರುವ ಪುಟ್ಟ ಕೊಠಡಿಯಲ್ಲಿದ್ದುಕೊಂಡು ಜೀವನ ಕಳೆದಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನೆ ಇರುವವನೂ ಅಲ್ಲ. ನಾನು ಯಾವತ್ತಿಗೂ ಸುಳ್ಳು ಹೇಳಿಕೊಂಡು ಜೀವನ ಮಾಡಿಲ್ಲ. ನನ್ನ ತಾಯಿ ತಂದೆ ನನಗೂ ಸಂಸ್ಕಾರ ಕಲಿಸಿ ಕೊಟ್ಟಿದ್ದಾರೆ. ನಾನು ಯಾರ ಮುಲಾಜಲ್ಲೂ ಬದುಕಿಲ್ಲ' ಎಂದು ಪತ್ರಿಕಾಗೋಷ್ಠಿ ವೇಳೆ ಸಚಿವ ವಿ.ಸೋಮಣ್ಣ ಭಾವುಕರಾದರು.

'ನಾನು ಬಿಜೆಪಿಗೆ ಬರಲು ಅನಂತ್ ಕುಮಾರ್ ಕಾರಣ'

ಯಡಿಯೂರಪ್ಪ ನಮ್ಮೆಲ್ಲರ ಪ್ರಶ್ನಾತೀತ ನಾಯಕರಾಗಿದ್ದು, ಅವರು ಆರೋಗ್ಯವಾಗಿರಲಿ. ಅಂತೆಯೇ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ ಕೂಡ ನಮ್ಮ ನಾಯಕರು. ನಾನು ಬಿಜೆಪಿಗೆ ಬರಲು ಅನಂತ್ ಕುಮಾರ್ ಕಾರಣ. ಇನ್ನು ಮುಂದಾದರೂ ನಮ್ಮನ್ನು ತೇಜೋವಧೆ ಮಾಡುವುದನ್ನು ಬಿಡಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ.

- ವಿ.ಸೋಮಣ್ಣ, ವಸತಿ ಸಚಿವ.

Similar News