ಚಿನ್ನದ ಗಟ್ಟಿ ದರೋಡೆ ಪ್ರಕರಣ: ಇಬ್ಬರು ರೈಲ್ವೆ ಪೊಲೀಸರು ಸೇರಿ ಮೂವರು ವಶಕ್ಕೆ
Update: 2023-03-14 18:18 GMT
ಬೆಂಗಳೂರು, ಮಾ.14: ತಾವೂ ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು 1 ಕೋಟಿ 12 ಲಕ್ಷ ರೂ ಮೌಲ್ಯದ ಚಿನ್ನದ ಗಟ್ಟಿ ಕಸಿದು ಪರಾರಿಯಾಗಿದ್ದ ಪ್ರಕರಣ ಸಂಬಂಧ ರೈಲ್ವೆ ಪೊಲೀಸ್ ಕಾನ್ಸ್‍ಟೇಬಲ್‍ಗಳಿಬ್ಬರನ್ನು ಇಲ್ಲಿನ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲ್ವೆ ಪೊಲೀಸ್ ಕಾನ್ಸ್‍ಟೇಬಲ್‍ಗಳಾದ ಜ್ಞಾನೇಶ್ ಹಾಗೂ ವಟಾವಟಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಎಂಬವರನ್ನು ತಡೆದು ಬೆದರಿಸಿದ್ದ ಆರೋಪಿಗಳು ಅವರ ಬಳಿಯಿದ್ದ ಚಿನ್ನದ ಗಟ್ಟಿ ಪಡೆದುಕೊಂಡು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.