ಮರೆಯಾದ ವಿಜ್ಞಾನ ಸಂವಹನಕಾರ್ತಿ ಸುಮಂಗಲಾ ಮುಮ್ಮಿಗಟ್ಟಿ
ಕನ್ನಡದಲ್ಲಿ ವಿಜ್ಞಾನ ಸಂವಹನ. ಎಷ್ಟೆಲ್ಲ ವಿಜ್ಞಾನಿಗಳ ಮೂಲಕ ಕನ್ನಡ ಮಾತನಾಡಿಸಿ ಆಕಾಶವಾಣಿಯ ಕೇಳುಗರಿಗೆ ಹೊಸ ಪಾಠಗಳನ್ನು ಮುಟ್ಟಿಸಿದವರು. ಅರಿವಿನ ಆಕಾಶ ವಿಸ್ತರಿಸುವುದಕ್ಕೆ ಕಾರಣರಾದವರು. ಜೊತೆಜೊತೆಗೇ ನಾಡಿನ ಹಲವಾರು ಪತ್ರಿಕೆಗಳಿಗೆ ಬರಹಗಳನ್ನು ಕೊಡುತ್ತಿದ್ದವರು. ಹಲವಾರು ಪುಸ್ತಕಗಳನ್ನು ಬರೆದವರು. ಅದೆಷ್ಟೊ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟವರು.
ಒಬ್ಬರೇ ಇಷ್ಟೆಲ್ಲವನ್ನೂ ಮಾಡುವುದು ಸಾಧ್ಯವೇ ಎಂಬ ಬೆರಗನ್ನು ಹತ್ತಿರದವರಲ್ಲಿ ಮೂಡಿಸಿದ್ದವರು. ಆದರೆ ನಿಜವಾಗಿಯೂ ಅಷ್ಟನ್ನೂ ಸಾಧಿಸಿ ತೋರಿಸಿದ್ದವರು. ಅಂಥ ಒಬ್ಬ ಸಾಧಕಿ ಮೊನ್ನೆ ಮಾರ್ಚ್ ೧೨ರಂದು ನಿಧನರಾದರು.
ಅವರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ, ವಿಜ್ಞಾನ ಸಂವಹನಕಾರ್ತಿ ಯಾಗಿದ್ದ, ರಾಷ್ಟ್ರಪ್ರಶಸ್ತಿ ವಿಜೇತೆ ಸುಮಂಗಲಾ ಎಸ್. ಮುಮ್ಮಿಗಟ್ಟಿ. ಅವರಿಗೆ ೫೯ ವರ್ಷ ವಯಸ್ಸಾಗಿತ್ತು. ಅವರು ಪತಿ ಮತ್ತು ಪುತ್ರನನ್ನು ಅಗಲಿದ್ದಾರೆ.
ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದ ಸುಮಂಗಲಾ ಅವರು ೪೦ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು ಬರೆದಿದ್ದರು. ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಹಲವಾರು ವಿಜ್ಞಾನ ಸಂವಹನಕಾರರನ್ನು ಹುರಿದುಂಬಿಸಿ, ವಿಜ್ಞಾನ ಸಂವಹನಕಾರರ ಒಂದು ಪಡೆಯನ್ನೇ ಕಟ್ಟಿ ಬೆಳೆಸಿದ್ದರು.
ಅವರ ಸಾಧನೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಪರಿಸರ ಪ್ರಶಸ್ತಿ, ರೇಡಿಯೊ ಆಸ್ಕರ್ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪ್ರಮುಖವಾದವುಗಳು. ಇತ್ತೀಚೆಗೆ ಪ್ರಕಟವಾದ ‘ವಿಜ್ಞಾನ ತಂತ್ರಜ್ಞಾನ ದರ್ಶನ’ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ‘ಅದ್ಭುತ ಆವಾಸ ಅಂಡಮಾನ್’ ಮೊದಲಾದ ಕೃತಿಗಳು ಅವರ ಬರವಣಿಗೆಯ ವಿಷಯ ವಿಸ್ತಾರಕ್ಕೆ ಉದಾಹರಣೆಯಾಗಿವೆ.
ಬೆಂಗಳೂರು ಆಕಾಶವಾಣಿಯನ್ನು ರಾಷ್ಟ್ರಮಟ್ಟಕ್ಕೆ, ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದವರು ಸುಮಂಗಲಾ. ಅವರ ಪತಿ ಶಶಿಕಾಂತ ಮುಮ್ಮಿಗಟ್ಟಿ ಇದೆಲ್ಲಕ್ಕೂ ಬೆಂಬಲವಾಗಿದ್ದರು.
ಇತರ ಭಾಷೆಗಳಿಗೂ ಮಾದರಿ ಎನ್ನಿಸುವ ಹಾಗೆ ಆಕಾಶವಾಣಿಯಲ್ಲಿ ವಿಜ್ಞಾನದ ಸರಣಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಅವರದಾಗಿತ್ತು. ಜೀವಿವೈವಿಧ್ಯ, ಜಲಪರಿಸರ, ಹವಾಮಾನ, ಪರಿಸರ ಮಾಲಿನ್ಯ ಹೀಗೆ ಯಾವ ವಿಚಾರವೇ ಆದರೂ ಅದಕ್ಕೊಂದು ಅಧಿಕೃತತೆ ಸಿಗುವ ಹಾಗೆ, ಕೇಳುಗರ ಪಾಲಿಗೆ ಅದೊಂದು ಉಪಯುಕ್ತ ಕಾರ್ಯಕ್ರಮವಾಗುವ ಹಾಗೆ ಸರಣಿಯನ್ನು ರೂಪಿಸುತ್ತಿದ್ದರು.
ಇಂಥ ಹಲವು ಮುಖ್ಯ ಕಾರ್ಯಕ್ರಮಗಳಲ್ಲಿ ಅವರು ಕೇಳುಗರಿಗಾಗಿ ನಡೆಸಿಕೊಟ್ಟ ನಕ್ಷತ್ರ ವೀಕ್ಷಣೆ ಸರಣಿ ಕಾರ್ಯಕ್ರಮವೂ ಒಂದು. ಹೊಸಕೋಟೆ ಬಳಿಯ ಎತ್ತರದ ಗೋಪುರದ ಮೇಲೆ ಅದಕ್ಕಾಗಿ ಅವರು ವಿಶೇಷ ತಾಂತ್ರಿಕ ವ್ಯವಸ್ಥೆ ಮಾಡಿದ್ದರು. ಜಿಟಿಎನ್ ಸೇರಿದಂತೆ ನಾಡಿನ ಸುಪ್ರಸಿದ್ಧ ತಾರಾತಜ್ಞರನ್ನು ಕರೆಸಿ, ನಕ್ಷತ್ರಪುಂಜಗಳ ನೇರ ವೀಕ್ಷಕ ವಿವರಣೆ ಕೊಡಿಸಿದ್ದರು. ಅದು ರಾಷ್ಟ್ರದ ಬೇರೆ ಬೇರೆ ಆಕಾಶವಾಣಿ ನಿಲಯಗಳಲ್ಲೂ ಚರ್ಚೆಯಾಗಿತ್ತು, ಮೆಚ್ಚುಗೆಗೆ ಪಾತ್ರವಾಗಿತ್ತು.
ಸುಮಂಗಲಾ ಅವರ ಮತ್ತೊಂದು ಮಹತ್ವದ ಕೆಲಸವೆಂದರೆ, ೪೦೦ಕ್ಕೂ ಹೆಚ್ಚು ಪಕ್ಷಿಗಳ ಇಂಚರದ ಧ್ವನಿಮುದ್ರಣವನ್ನು ಮಾಡಿಸಿದ್ದು. ಕೆಲವನ್ನು ಇವರೇ ನೇರವಾಗಿ ಬೆಟ್ಟ, ಕಾಡುಮೇಡುಗಳಲ್ಲಿ ಸುತ್ತಿ ಧ್ವನಿಗ್ರಹಣ ಮಾಡಿದ್ದರೆ, ಮತ್ತೆ ಕೆಲವನ್ನು ಸ್ಟೂಡಿಯೋ ಆರ್ಕೈವ್ ನಿಂದ ತೆಗೆದು ಜೋಡಿಸಿದ್ದರು. ಪಕ್ಷಿಗಳನ್ನು ಕಾಣದವರೂ ಅವುಗಳ ಸೊಗಸನ್ನು ಆ ಧ್ವನಿಯ ಮೂಲಕವೇ ಆಸ್ವಾದಿಸಲು ಸಾಧ್ಯವಾಗುವಂತೆ ಮಾಡಿರುವ ಅಪರೂಪದ ಸಾಧನೆ ಅದು.
ಹವಾಗುಣ ಬದಲಾವಣೆ ಮತ್ತು ರೈತರ ಬದುಕನ್ನು ಕುರಿತು ಅವರು ಹಿರಿಯ ಪತ್ರಕರ್ತ ಮತ್ತು ವಿಜ್ಞಾನ ಲೇಖಕ ನಾಗೇಶ್ ಹೆಗಡೆಯವರ ನೆರವಿನಿಂದ ರೂಪಿಸಿದ್ದ Farming in a warming planet ಎಂಬ ಇಂಗ್ಲಿಷ್ ಕಾರ್ಯಕ್ರಮ ಎಲ್ಲ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಪ್ರಸಾರವಾಯಿತು. ರಾಷ್ಟ್ರಪ್ರಶಸ್ತಿ ಮಾತ್ರವಲ್ಲ, ಇರಾನ್ ದೇಶದವರು ನೀಡುವ ರೇಡಿಯೊ ಆಸ್ಕರ್ ಇಂಟರ್‌ನ್ಯಾಶನಲ್‌ನಲ್ಲಿಯೂ ಅದಕ್ಕೆ ಪ್ರಶಸ್ತಿ ಬಂದಿತ್ತು.
ಇದೆಲ್ಲ ಒಂದು ಪಾಲಾದರೆ, ಅವರ ಬರವಣಿಗೆಯದ್ದೇ ಮತ್ತೊಂದು ಪಾಲು. ‘ಭುವಿಯೊಂದೇ ಭವಿಷ್ಯವೊಂದೇ’, ‘ಪೃಥ್ವಿಗೀಗ ಪರ್ವಕಾಲ’, ‘ನಮ್ಮ ಭೂಮಿ ನಮ್ಮ ಪರಿಸರ’, ಇಸ್ರೊ ವಿಜ್ಞಾನಿಗಳ ಸಾಹಸ ಕುರಿತು ‘ಚಂದ್ರ ಶೋಧನೆ’ ಎಂಬ ಪುಸ್ತಕಗಳಲ್ಲದೆ, ಆರ್ಕಿಮಿಡೀಸ್, ಟಾಲೆಮಿ, ಫ್ರಾಂಕ್ಲಿನ್, ಕೆಪ್ಲರ್, ಕೊಪರ್ನಿಕಸ್, ಆರ್‌ಎಲ್‌ಎನ್, ಡಾ. ಉಲ್ಲಾಸ ಕಾರಂತ ಇವರೆಲ್ಲರ ಬಗ್ಗೆ ಸುಮಂಗಲಾ ಬರೆದಿದ್ದಾರೆ. ಅಂಡಮಾನ್ ಆದಿವಾಸಿಗಳ ಅವಸಾನ ಕುರಿತು ಪಂಕಜ್ ಶೇಖ್ಸಾರಿಯಾ ಬರೆದ ಇಂಗ್ಲಿಷ್ ಕಾದಂಬರಿಯನ್ನು ‘ಕೊನೆಯ ಅಲೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅಂಡಮಾನ್ ದ್ವೀಪಸಮೂಹದಲ್ಲಿನ ಜೀವಾವಾಸದ ಬಗ್ಗೆ ಪುಸ್ತಕ ಬರೆದಿದ್ದಾರೆ.
ಕೆಲಸದಲ್ಲಿ ಅವರೆಷ್ಟು ನಿರಂತರವಾಗಿ ತೊಡಗಿಸಿಕೊಂಡಿರುತ್ತಿದ್ದರು ಎಂದರೆ, ಎಂದೂ ಅವರು ಆಯಾಸಪಟ್ಟಿದ್ದೇ ಇಲ್ಲವೇನೊ ಎನ್ನುವ ಹಾಗಿದ್ದರು. ಕ್ಯಾನ್ಸರನ್ನೂ ಗೆದ್ದಿದ್ದರು. ಕಾಡಿದ್ದ ಕೊರೋನವನ್ನೂ ಹಿಮ್ಮೆಟ್ಟಿಸಿದ್ದರು. ಅವರದೆಂಥ ಶಕ್ತಿಯಾಗಿತ್ತೆಂದರೆ, ದಿನವೂ ವಿಜ್ಞಾನದ ಒಂದೊಂದು ವಿಷಯದ ಬಗ್ಗೆ ಐದು ನಿಮಿಷಗಳ ಟಿಪ್ಪಣಿ ನೀಡುವ ಮೂರು ವರ್ಷಗಳ ಅವಧಿಯ ಬಹುದೊಡ್ಡ ಯೋಜನೆಯೊಂದಕ್ಕೆ ಅವರು ಕೈಹಾಕಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು.
ಹಾಗೆ ದಣಿವರಿಯದೆ ಬರೆದ, ಕಾರ್ಯಕ್ರಮ ರೂಪಿಸಿದ, ನಿರೂಪಿಸಿದ, ಹಕ್ಕಿಗಳ ಉಲಿಯನ್ನು ಜೋಪಾನ ಮಾಡಿದ್ದ, ವಿಜ್ಞಾನ ಲೇಖಕರು, ಸಂವಹನಕಾರರ ಸಮೂಹವನ್ನೇ ಕನ್ನಡದ ಬಾನುಲಿಯಂಗಳದಲ್ಲಿ ಜೊತೆಗೂಡಿಸಿದ್ದ ಸುಮಂಗಲಾ ಅವರು ಇನ್ನಿಲ್ಲ. ಆಕಾಶವಾಣಿಯ ವಿಜ್ಞಾನ ವಿಭಾಗ ಬಹುಶಃ ಅವರಿಲ್ಲದೆ ಬಡವಾಗಿದೆ ಎಂದೇ ಅವರೊಂದಿಗೆ ಕೆಲಸ ಮಾಡಿದ್ದ ಎಲ್ಲರೂ ಭಾವಿಸುತ್ತಾರೆ.