ಸ್ವಯಂ ಘೋಷಿತ 'ಕಾಮನ್‍ಮ್ಯಾನ್' ಬೊಮ್ಮಾಯಿಯಿಂದ ಹೆಲಿಕಾಪ್ಟರ್ ದುರ್ಬಳಕೆ: ರಮೇಶ್ ಬಾಬು ಆರೋಪ

Update: 2023-03-15 14:52 GMT

ಬೆಂಗಳೂರು, ಮಾ.15: ಸ್ವಯಂ ಘೋಷಿತ ಕಾಮನ್‍ಮ್ಯಾನ್ ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕತೆಗೆ ಬದ್ಧವಾಗಿದ್ದರೆ, ಸರಕಾರಿ ಹಣದಲ್ಲಿ ತಮ್ಮ ಖಾಸಗಿ ಮತ್ತು ರಾಜಕೀಯ ಕಾರಣಗಳಿಗೆ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ದುರ್ಬಳಕೆಯ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೆ ಬೊಮ್ಮಾಯಿ ಅವರು ಹಲವಾರು ಬಾರಿ ವಿಶೇಷ ವಿಮಾನ ಸೇವೆ ಮತ್ತು ಹೆಲಿಕಾಪ್ಟರ್ ಬಳಕೆ ಮಾಡಿದ್ದು, ಸುಮಾರು 26 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುತ್ತಾರೆ. ಅವರ ಖಾಸಗಿ ಕಾರ್ಯಕ್ರಮಗಳಿಗೆ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಬಳಕೆ ಆಗಿರುತ್ತದೆ. ಹಾಗಾಗಿ 26 ಕೋಟಿ ಹಣವನ್ನು ಸರಕಾರಕ್ಕೆ ಖಜಾನೆಗೆ ವಾಪಸ್ಸು ತುಂಬಲಿ ಎಂದು ಅವರು ಒತ್ತಾಯಿಸಿದ್ದಾರೆ. 

ರಾಜ್ಯದ ಮುಖ್ಯಮಂತ್ರಿಗಳು ಅತಿವೃಷ್ಠಿ, ಅನಾವೃಷ್ಠಿಯ ಸಂದರ್ಭ ಸೇರಿರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಮಾತ್ರ ಸರಕಾರದ ವೆಚ್ಚದಲ್ಲಿ ವಿಮಾನಯಾನ, ವಿಶೇಷ ವಿಮಾನಯಾನ ಮತ್ತು ಹೆಲಿಕಾಪ್ಟರ್ ಬಳಕೆ ಮಾಡಬಹುದು. ಆದರೆ ಸ್ವಯಂ ಘೋಷಿತ ಕಾಮನ್‍ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೈಯಕ್ತಿಕ ಕಾರಣಗಳಿಗೆ ಈ ಸೌಲಭ್ಯವನ್ನು ಬಳಕೆ ಮಾಡಿದ್ದಾರೆ. 

ನಗರದಿಂದ ಒಂದು ತಾಸಿನಲ್ಲಿ ರಸ್ತೆ ಪ್ರಯಾಣ ಮಾಡಬಹುದಾದ ತುಮಕೂರಿನಂತಹ ಪ್ರದೇಶಗಳಿಗೂ ಸರಕಾರಿ ಹಣದಲ್ಲಿ ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಅಲ್ಲದೆ, ಬಿಜೆಪಿ ಸರಕಾರದ ಮುಖ್ಯಮಂತ್ರಿಗಳು ಮೂರು ವರ್ಷದಲ್ಲಿ ಸಾಮಾನ್ಯ ವೆಚ್ಚಗಳ ಅಡಿಯಲ್ಲಿ ಅತಿಥಿ ಸತ್ಕಾರಕ್ಕೆ ಸುಮಾರು 167.92 ಕೋಟಿ ರೂಪಾಯಿ ಖರ್ಚು ಮಾಡಿರುತ್ತಾರೆ ಎಂದು ಅವರು ದೂರಿದ್ದಾರೆ.

Similar News