ಭಟ್ಕಳ: ನವೀಕೃತಗೊಂಡ ಆಹ್ಮದ್ ಸಯೀದ್ ಜುಮಾ ಮಸೀದಿ ಲೋಕಾರ್ಪಣೆ
ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ್ ನಲ್ಲಿರುವ ನವೀಕೃತಗೊಂಡಿರುವ ಆಹ್ಮದ್ ಸಯೀದ್ ಜುಮಾ ಮಸೀದಿಯನ್ನು ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮೊಹಿಯುದ್ದೀನ್ ಅಕ್ರಮಿ ಮದನಿ, ನದ್ವಿ ಶನಿವಾರ ಅಸರ್ ನಮಾಝ್ ಬಳಿಕ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇನ್ನೂ ಕೆಲವೇ ದಿನಗಳಲ್ಲಿ ಪವಿತ್ರ ತಿಂಗಳು ರಮಝಾನ್ ಆಗತವಾಗುತ್ತಿದೆ. ರಮಝಾನ್ ತಿಂಗಳು ಅತ್ಯಂತ ಪುಣ್ಯದಾಯಕ ಮತ್ತು ದಾನಧರ್ಮದ ತಿಂಗಳಾಗಿದ್ದು ಆರೋಗ್ಯವಂತ ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ ಪುರುಷರಿಗೆ ಉಪವಾಸವೃತ ಆಚರಿಸುವುದು ಕಡ್ಡಾಯಗೊಳಿದೆ ಎಂದರು.
ಆಹ್ಮದ್ ಸಯೀದ್ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ. ಪ್ರಸ್ತಾವಿಕವಾಗಿ ಮಾತನಾಡಿ, ಈ ಮಸೀದಿಯಲ್ಲಿ ಪ್ರಾರ್ಥನೆಗೆ ಬರುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದನ್ನು ವಿಸ್ತರಿಸಿ ಅತ್ಯಂತ ಸುಂದರವಾಗಿ ನವೀಕೃತಗೊಳಿಸಲಾಗಿದೆ. ಈ ಮಸೀದಿ ನವೀಕರಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಇದರ ಮಾಜಿ ರಾಜ್ಯಾಧ್ಯಕ್ಷ ಅಥರುಲ್ಲಾ ಷರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು, ಜಮಾಅತೆ ಇಸ್ಲಾಮೀ ಹಿಂದ್ ಬೆಳೆದುಬಂದ 75 ವರ್ಷಗಳ ಇತಿಹಾಸವನ್ನು ಜನರ ಮುಂದಿಟ್ಟಿದ್ದು ಜಮಾಅತ್ ಎಲ್ಲ ಸಮುದಾಯವನ್ನು ಧರ್ಮ, ಜಾತಿ, ಭಾಷೆಯ ಬೇಧವಿಲ್ಲದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಸಹಕಾರ ನೀಡುತ್ತಿದೆ ಎಂದರು.
ಹಾಫಿಝ್ ಉಬೈದುರ್ರಹ್ಮಾನ್ ರುಕ್ನುದ್ದೀನ್ ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮೌಲಾನ್ ಯಾಸಿರ್ ಬರ್ಮಾವರ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. ಆಹ್ಮದ್ ಸಯೀದ್ ಮಸೀದಿಯ ಇಮಾಮ್ ಮತ್ತು ಖತೀಮ್ ಮೌಲಾನ ಮುಹಮ್ಮದ್ ಜಾಫರ್ ಫಖ್ಖಿಭಾವ್ ನದ್ವಿ ಧನ್ಯವಾದ ಅರ್ಪಿಸಿದರು.
ಮೌಲಾನ ಇಕ್ಬಾಲ್ ಆಹಮದ್ ನಾಯ್ತೆ, ಸೈಯ್ಯದ್ ಶಕೀಲ್ ಎಸ್.ಎಂ, ಕಾದಿರ್ ಮೀರಾ ಪಟೇಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.