ಕಾಂಗ್ರೆಸ್ ಪಕ್ಷ ಸಾಮರಸ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿದೆ: ಯು.ಟಿ.ಖಾದರ್
ಮುಡಿಪುನಲ್ಲಿ 'ಪ್ರಜಾಧ್ವನಿ' ಯಾತ್ರೆ ಕಾರ್ಯಕ್ರಮ
ಕೊಣಾಜೆ: ಕೋಮುವಾದದಿಂದ ಯಾರಿಗೂ ಉಪಕಾರ ಇಲ್ಲ, ಕಾಂಗ್ರೆಸ್ ಪಕ್ಷ ಸಾಮರಸ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿದೆ. ಕೋಮುವಾದವನ್ನೇ ಮುಂದಿಟ್ಟುಕೊಂಡು ಆಡಳಿತ ನಡೆಸಿದ ಬಿಜೆಪಿ ಐಸಿಯುನಲ್ಲಿದ್ದು ಎಸ್ಡಿಪಿಐ ಮತ್ತು ಎಐಎಂಐಎಂ ಪಕ್ಷಗಳು ಆಕ್ಸಿಜನ್ ನೀಡುತ್ತಿವೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಮಂಗಳೂರು ವಿದಾಸಭಾ ಕ್ಷೇತ್ರ ವ್ಯಾಪ್ತಿಯ ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ರವಿವಾರ ಮುಡಿಪು ಸಮೀಪದ ಕೈರಂಗಳದ ಎಸ್ ಕೆ ಸಭಾಂಗಣದಲ್ಲಿ ನಡೆದ 'ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಬಿಸ್ಕೆಟ್ ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಹೆಣ್ಮಕ್ಕಳ ಮದುವೆ ಸಂದರ್ಭ ಒಂದು ಪವನ್ ಚಿನ್ನ ಹಾಕಲೂ ಆಗದೆ ರೋಲ್ಡ್ ಗೋಲ್ಡ್ ಚಿನ್ನ ಹಾಕಿ ಕಣ್ಣೀರಿನಲ್ಲಿ ಕಳಿಸಿ ಕೊಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಇಂದಿರಾಗಾಂಧಿ ಕಾಲದ ವೈಭವ ಮರಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಾಚರಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಿಜೆಪಿಯ ಸುಳ್ಳಿನ ಬೀಜದಿಂದ, ಪ್ರಚೋಧನಕಾರಿ ಹೇಳಿಕೆಯ ಮೂಲಕ ಹಾಗೂ ಕೋಮುದಳ್ಳೂರಿಯ ಮೂಲಕ ಅಧಿಕಾರವನ್ನು ಪಡೆದುಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಜನರ ಬದುಕು ಕಟ್ಟುವ ಯೋಜನೆಯನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆಕಾಂಗ್ರೆಸನ್ನು ಅಧಿಕಾರಕ್ಕೆ ತರೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಮುಖಂಡರಾದ ಭರತ್ ಮುಂಡೋಳಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಮತಾ ಎಸ್ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಮುಖಂಡರಾದ ಮಹಮ್ಮದ್ ಮೋನು, ಚಂದ್ರಹಾಸ ಕರ್ಕೇರ, ಅಲ್ಪಸಂಖ್ಯಾತ ಘಟಕದ ಅಬ್ದುಲ್ ನಾಸೀರ್ ಕೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಅರುಣ್ ಡಿಸೋಜ, ಅಬ್ದುಲ್ ಖಾದರ್, ಬಶೀರ್, ಲಾರೆನ್ಸ್, ಅನಿಲ್ ಕುಮಾರ್, ಇಬ್ರಾಹಿಂ ನಡುಪದವು, ಹೈದರ್ ಕೈರಂಗಳ, ಮುಸ್ತಫಾ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಜಲೀಲ್ ಮೋಂಟುಗೋಳಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.