ಕಾರ್ಮಿಕ ವಿರೋಧಿ ಬಿ.ಜೆ.ಪಿ ಸರಕಾರವನ್ನು ಸೋಲಿಸಿ - ಕಾಮ್ರೇಡ್ ಪಿ.ಪಿ.ಅಪ್ಪಣ್ಣ

Update: 2023-03-20 18:11 GMT

ಬಂಟ್ವಾಳ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿ ಬಿ.ಜೆ.ಪಿ ಸರಕಾರವನ್ನು ಸೋಲಿಸಿ ಎಂದು  ಎ.ಐ.ಸಿ‌.ಸಿ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ.ಅಪ್ಪಣ್ಣ ಕರೆ ನೀಡಿದರು.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ವತಿಯಿಂದ  ಬಿ.ಸಿ.ರೋಡಿ ನಲ್ಲಿ ನಡೆದ ದ.ಕ ಜಿಲ್ಲಾ  ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಎ.ಐ‌.ಸಿ.ಸಿ.ಟಿ.ಯು  ಒಂದು ಕೇಂದ್ರ ಕಾರ್ಮಿಕ ಸಂಘಟನೆಯಾಗಿದ್ದು ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು , ಹಲವಾರು ಚಳುವಳಿಗಳನ್ನು ನಡೆಸುವುದರ ಮೂಲಕ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ ಎಂದರು . 

ಕೊರೋನ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು  ಸಂಘಟನೆಯು ಹೋರಾಟ ಮಾಡಿದೆ, ರಾಜ್ಯ ಸರಕಾರವು ಅಕ್ಷರ ದಾಸೋಹ, ಆಶಾ, ಅಂಗನವಾಡಿ ಮುಂತಾದ ನೌಕರರನ್ನು ಇನ್ನೂ ನೌಕರರೆಂದು ಪರಿಗಣಿದೆ ಸಮಾಜ ಸೇವಕರು ಎಂದು ಬಿಂಬಿಸಿ ಸೌಲಭ್ಯ ದಿಂದ ವಂಚಿಸುತ್ತಿದೆ ಎಂದರು.

ಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿ ಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕರು ಕೇವಲ ತಮ್ಮ ಬೇಡಿಕೆಗಳ ಈಡೇರಿಕೆ ಮಾತ್ರ ಹೋರಾಟಗಳನ್ನು‌ ನಡೆಸಲು ಸೀಮಿತರಾಗಬಾರದು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ ಸರಕಾರವನ್ನು ಕಿತ್ತೊಗೆಯಲು ಕಾರ್ಮಿಕ ವರ್ಗ ಪಣತೊಡಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಸಿ.ಪಿ‌.ಐ.ಎಂ.ಎಲ್ (ಲಿಬರೇಶನ್ ) ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಪಿ.ಆರ್.ಎಸ್ ಮಣಿ ಮಾತನಾಡಿ   ಇಂದು‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಾಂತಿಕಾರಿ  ಸಂಘಟನೆ ಎ.ಐ.ಸಿ.ಸಿ.ಟಿ.ಯು ಸಮಾವೇಶ ನಡೆಯುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ,  ಸರಕಾರವು ಅಕ್ಷರ ದಾಸೋಹ ನೌಕರರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದ್ದು,ಅವರನ್ನು ನೌಕರರಾಗಿ ಪರಿಗಣಿಸಲು ಹಿಂದೇಟು ಹಾಕುತ್ತಿದೆ, ಅಕ್ಷರ ದಾಸೋಹ ನೌಕರರು ತಮ್ಮ‌ ನೌಕರಿ ಕಾಯಂಮಾತಿಗಾಗಿ ಬಲಿಷ್ಟ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಯಾಶಿಸ್ಟರು ಪ್ರಯೋಗ ಶಾಲೆಯನ್ನಾಗಿ ಮಾಡಿದ್ದು ಪ್ಯಾಶಿಸ್ಟರು‌ ಕಾರ್ಮಿಕರ ತಲೆಗೆ ವಿಷ ಬೀಜ ಬಿತ್ತುವ ಮೂಲಕ ನಿಜವಾದ ಕಾರ್ಮಿಕರ ಸಮಸ್ಯೆ ಗೆ ಸಂಘಟಿತಗೊಳ್ಳದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಪ್ಯಾಶಿಸಂ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು ಹೋರಾಡಬೇಕೆಂದು ಕರೆ ನೀಡಿದರು.

ಸಮಾವೇಶದಲ್ಲಿ ಕಾರ್ಮಿಕ ಮುಖಂಡರಾದ ಕಾಮ್ರೇಡ್ ರಾಮಣ್ಣ ವಿಟ್ಲ  ಮಾತನಾಡಿ ಸರಕಾರಗಳು ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಸತಾಯಿಸುತ್ತಿದ್ದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಯನ್ನು ಬಿ.ಜೆ.ಪಿ ಸರಕಾರವು ದುರುಪಯೋಗ ಮಾಡಿ ಕೋಟಿಗಟ್ಟಲೆ ಹಣ ವನ್ನು ಕೊಳ್ಳೆಹೊಡೆಯಾಲಾಗಿದ್ದು ಕಿಟ್ ಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಬಿಕ್ಷಕರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಕ್ಷರದಾಸೋಹ ನೌಕರರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ನಿವೃತ್ತಿ ಹೆಸರಿನಲ್ಲಿ ಯಾವುದೇ ಸೌಲಭ್ಯ ನೀಡದೆ ಕೆಲಸದಿಂದ ವಜಾ ಮಾಡಲಾಗುತ್ತಿದ್ದು ಇದರ ವಿರುದ್ಧ ಹೋರಾಟಕ್ಕೆ ಕರೆ ನೀಡಿದರು.

ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಜಿಲ್ಲಾ ಮುಖಂಡ ಭರತ್ ಕುಮಾರ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡೆ ಜಯಶ್ರೀ .ಆರ್.ಕೆ‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಮೋಹನ್ ಕೆ.ಇ ಸ್ವಾಗತಿಸಿ ಪ್ರಾಸ್ತಾವನೆಗೈದರು. ಯುವ ರೈತ ಸಂಘದ ಗೌರವಾದ್ಯಕ್ಷ ಸುರೇಂದ್ರ ಕೋರ್ಯ, ಸಂಘದ ಜಿಲ್ಲಾ ಮುಖಂಡ ಸತೀಶ್ ಕುಮಾರ್, ಆದಿವಾಸಿ ಸಂರಕ್ಷಣಾ ಸಮಿತಿ ಕೊಡಗು ಜಿಲ್ಲಾ ಮುಖಂಡ ರವಿ , ಕಾರ್ಮಿಕ ಮುಖಂಡ ಆನಂದ ಶೆಟ್ಟಿಗಾರ್, ಸುರೇಂದ್ರ ಕೋಟ್ಯಾನ್ , ಸರಸ್ವತಿ ಮಾಣಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡ ವಾಣಿಶ್ರೀ ಕನ್ಯಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . 

ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು ಅಧ್ಯಕ್ಷರಾಗಿ ರಾಮಣ್ಣ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್.ಕೆ.ಇ., ಉಪಾದ್ಯಕ್ಷರುಗಳಾಗಿ ರಾಜಾ ಚೆಂಡ್ತಿಮಾರ್, ಇಬ್ರಾಹಿಂ ಮೈಂದಾಳ, ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿಗಳಾಗಿ ಸತೀಶ್ ಕುಮಾರ್ ಮಂಗಳೂರು, ಭರತ್ ಕುಮಾರ್ ಮಂಗಳೂರು, ನಾಗೇಶ್ ಕೈರಂಗಳ , ಕೋಶಾಧಿಕಾರಿಯಾಗಿ ಸರಸ್ವತಿ ಮಾಣಿ ಹಾಗೂ 13 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಸಿ.ಪಿ‌.ಐ.ಎಂ.ಎಲ್. ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ .ಆರ್.ಎಸ್.ಮಣಿ ದ್ವಜಾರೋಹಣ ನೆರವೇರಿಸಿದರು. ಮೋಹನ್ ಕೆ.ಇ .ವಂದಿಸಿದರು

Similar News