ಪುನೀತ್‍ಗೆ ಪದ್ಮಶ್ರೀ ನೀಡದಂತೆ ಸಚಿವ ಆರ್. ಅಶೋಕ್ ಒತ್ತಡ: ಆರೋಪ
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ
Update: 2023-03-21 14:35 GMT
ಬೆಂಗಳೂರು, ಮಾ.21: ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಬಗ್ಗೆ ರಾಜ್ಯ ಸರಕಾರವು ಶಿಫಾರಸ್ಸು ಮಾಡದಂತೆ ಕಂದಾಯ ಸಚಿವ ಆರ್. ಅಶೋಕ್ ತಡೆದಿದ್ದಾರೆ ಎಂದು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟವು ಆರೋಪಿಸಿದೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಹೊನ್ನಯ್ಯಗೌಡ ಎಚ್., ಸಚಿವ ಆರ್. ಅಶೋಕ ಅವರ ಒತ್ತಡದಿಂದಲೇ ಮುಖ್ಯಮಂತ್ರಿಗಳು ನಟ ಪುನೀತ್ ರಾಜ್‍ಕುಮಾರ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿಲ್ಲ ಎಂಬ ಸತ್ಯ ಬಹಿರಂಗವಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಎ.24ರ ರಾಜ್‍ಕುಮಾರ್ ಜಯಂತಿಯಂದು ಆರ್. ಅಶೋಕ್ ವಿರುದ್ಧ ನಗರದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.