ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ: ಹೆಡ್ ಕಾನ್ಸ್ ಸ್ಟೇಬಲ್ ಬಂಧನ, ಪಿಎಸ್ಸೈ ಪರಾರಿ
ಬೆಂಗಳೂರು, ಮಾ.23: ವ್ಯಕ್ತಿಯೊರ್ವನನ್ನು ಅಪಹರಿಸಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪ ಪ್ರಕರಣ ಸಂಬಂಧ ಪಿಎಸ್ಸೈಯೊರ್ವ ಪರಾರಿಯಾಗಿದ್ದು, ಹೆಡ್ ಕಾನ್ಸ್ ಸ್ಟೇಬಲ್ ಓನೋರ್ವನನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮಾರತ್ತಹಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ರಂಗೇಶ್ ಪರಾರಿಯಾಗಿದ್ದು, ಹೆಡ್ ಕಾನ್ಸ್ ಸ್ಟೇಬಲ್ ಹರೀಶ್‍ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹುಲಿ ಉಗುರು, ಚರ್ಮವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಕರೆದೊಯ್ದಿದ್ದರು. ಆತನ ವಿರುದ್ಧ ಪ್ರಕರಣ ದಾಖಲಿಸದೇ ಮತ್ತು ಪೊಲೀಸ್ ಠಾಣೆಗೆ ಕರೆದೊಯ್ಯದೇ ಬೇರೆ ಕಡೆ ಆರೋಪಿಯನ್ನು ಬಚ್ಚಿಟ್ಟಿದ್ದರು. ನಂತರ ಆರೋಪಿಯ ಸಂಬಂಧಿಕರಿಗೆ ಕರೆ ಮಾಡಿ 40 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆನ್ನಲಾಗಿದೆ. ಇದರಿಂದ ಗಾಬರಿಗೊಂಡ ಆರೋಪಿ ಕುಟುಂಬಸ್ಥರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗಲೂರು ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಅಪಹರಣ ಮಾರತಹಳ್ಳಿ ಠಾಣೆ ಪಿಎಸ್ಸೈ ರಂಗೇಶ್ ಮತ್ತು ಹೆಡ್ ಕಾನ್ಸ್‍ಟೇಬಲ್ ಹರೀಶ್ ಎಂಬುದು ತಿಳಿದು ಬಂದಿದೆ. ಹೆಡ್ ಕಾನ್ಸ್‍ಟೇಬಲ್ ಹರೀಶ್‍ನನ್ನು ಬಂಧಿಸಿರುವ ಬಾಗಲೂರು ಪೊಲೀಸರು ತಲೆಮರೆಸಿಕೊಂಡಿರುವ ಪಿಎಸ್ಸೈ ರಂಗೇಶ್‍ಗಾಗಿ ತೀವ್ರ ಶೋಧ ನಡೆಸಿದ್ದಾರೆ.ಈ ಘಟನೆ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.