ಭಟ್ಕಳದಲ್ಲಿ ಮುಂದುವರಿದ ಮುಸ್ಲಿಮ್ ಅಭ್ಯರ್ಥಿಯ ಬೇಡಿಕೆ: ತಂಝೀಮ್ ಸಂಸ್ಥೆಗೆ ಬೇಡಿಕೆ ಸಲ್ಲಿಸಿದ ಸಾರ್ವಜನಿಕರು
ಭಟ್ಕಳ: ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕಳೆದ ಎರಡು ದಿನಗಳ ಹಿಂದೆ ಮಹಿಳೆಯರು ತಂಝೀಮ್ ಸಂಸ್ಥೆಗೆ ಬೇಡಿಕೆಯಲ್ಲಿ ಸಲ್ಲಿಸಿದ್ದರೆ, ಇಂದು ಮಂಕಿ, ಉಪ್ಪಾಣಿ, ಸಂಶಿ ಭಾಗದ ಸಾರ್ವಜನಿಕರು ತಂಝೀಮ್ ಪ್ರ.ಕಾ. ಅಬ್ದುಲ್ ರಖೀಬ್ ಎಂ.ಜೆ.ಯವರಿಗೆ ಬೇಡಿಕೆ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ, ಸಾಮಾಜಿಕ ಕಾರ್ಯಕರ್ತ ಇನಾಯತುಲ್ಲಾ ಹಯಾತ್ ನಾನು ಮುಸ್ಲಿಮ್ ಅಭ್ಯರ್ಥಿಯ ಬೇಡಿಕೆಯೊಂದಿಗೆ ಇಲ್ಲಿನ ಅತಿದೊಡ್ಡ ಸಂಸ್ಥೆಯಾಗಿರುವ ತಂಝೀಮ್ ಸಂಸ್ಥೆಗೆ ಮನವಿ ಸಲ್ಲಿಸಿದ್ದೇವೆ. ನಾವು ಇಲ್ಲಿನ ಹಿಂದೂ-ಮುಸ್ಲಿಮರು ಸೇರಿ ಮುಸ್ಲಿಮ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ನಮಗೆ ಹಿಂದೂಗಳು ಕೂಡ ಇಷ್ಟೊಂದು ದೊಡ್ಡ ಪ್ರಮಾಣದ ಮತದಾರರಿದ್ದುಕೊಂಡು ನೀವೇಕೆ ನಿಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದೂ ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ತಂಝೀಮ್ ಸಂಸ್ಥೆಗೆ ಬೇಡಿಕೆಯನ್ನು ಇಟ್ಟಿದ್ದೇವೆ ತಂಝೀಮ್ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.
ಸಾಮಾಜಿಕ ಕಾರ್ಯಕರ್ತ ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಮಿಸ್ಬಾಉಲ್ ಹಕ್ ಮಾತನಾಡಿ, ತಂಝೀಮ್ ಸಂಸ್ಥೆಯಲ್ಲಿ ಮಾ.19ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರ ಪರವಾಗಿ ನಿರ್ಣಯವಾಗಿತ್ತು. ಆದರೆ ಮರುದಿನ ನಡೆದ ಸರ್ವಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಣಯ ಹೇಗೆ ಉಲ್ಟಾ ಹೊಡೆಯಿತು. ಇದರ ಹಿಂದೆ ಯಾವ ರಾಜಕೀಯ ಪಕ್ಷದವರ ಕೈವಾಡವಿದೆ? ತಂಝೀಮ್ ಕಾರ್ಯಕಾರಿ ಸಮಿತಿ ಸದಸ್ಯರೇನಾದರೂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದರು. ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಬಿಜೆಪಿ ಬರುತ್ತೆ ಎಂದು ಹೆದರಿಸುವ ಸೋ ಕಾಲ್ಡ್ ಸೆಕ್ಯುಲರ್ ಅಭ್ಯರ್ಥಿಗಳು ಮುಸ್ಲಿಮರಿಗೆ ಅನ್ಯಾಯವಾಗುತ್ತಿದ್ದರೂ ಬಾಯಿ ಮುಚ್ಚಿ ಕುಳಿತುಕೊಂಡಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ 2ಬಿ ಕೆಟಾಗರಿಯನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ. ಈ ಕುರಿತು ಹೇಳಿಕೆ ಸೆಕ್ಯುಲರ್ ಪಾರ್ಟಿಯವರು ಹೇಳಿಕೆ ನೀಡಲಿ ಎಂದು ಪ್ರಶ್ನಿಸಿದ್ದು ಕಳೆದ ಬಾರಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸದೆ ಸೆಕುಲರ್ ಪಕ್ಷಕ್ಕೆ ನಮ್ಮ ಇಡೀ 32 ಸಾವಿರ ಮತಗಳನ್ನು ಹಾಕಿದ್ದೇವೆ. ಆದರೂ ಬಿಜೆಪಿ ಏಕೆ ಬಂದಿತು. ಈಗ ನಾವು ನಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೇಡಿಕೆ ಇಟ್ಟರೆ ತಪ್ಪೇನು. ಪ್ರತಿಯೊಬ್ಬರು ತಮ್ಮ ತಮ್ಮ ಜಾತಿಯವರಿಗೆ ಬೆಂಬಲ ನೀಡುತ್ತಾರೆ ನಾವೇನು ತಪ್ಪು ಮಾಡುತ್ತಿದ್ದೇಯೇ ಎಂದು ಪ್ರಶ್ನಿಸಿದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಖ್ ಎಂ.ಜೆ. ಮನವಿ ಪತ್ರ ಸ್ವೀಕರಿಸಿದರು.