ಉಡುಪಿ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್
Update: 2023-03-25 14:27 GMT
ಉಡುಪಿ, ಮಾ.25: ಹಲವು ತಿಂಗಳುಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಇಬ್ಬರು ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ.
ಕಳೆದ ಕೆಲವು ಸಮಯದಿಂದ ಜಿಲ್ಲೆಯಲ್ಲಿ ಆಗಾಗ ಒಬ್ಬರು ಪಾಸಿಟಿವ್ ಬರುತಿದ್ದು, ಇಂದು ಮೊದಲ ಬಾರಿ ಇಬ್ಬರಲ್ಲಿ ಕೊರೋನ ವೈರಸ್ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲೀಗ ನಾಲ್ವರು ಸೋಂಕಿಗೆ ಪಾಸಿಟಿವ್ ಇದ್ದು, ಎಲ್ಲರೂ ಮನೆಗಳಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ.
ದಿನದಲ್ಲಿ ಒಟ್ಟು 153 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಉಡುಪಿಯ 59 ಮಂದಿಯಲ್ಲಿ ಒಬ್ಬರಲ್ಲಿ ಹಾಗೂ ಕಾರ್ಕಳದ 25 ಮಂದಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕುಂದಾಪುರದಲ್ಲಿ 69 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಡಿಎಚ್‌ಓ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.