ಈ ವಾರ

Update: 2023-03-26 04:49 GMT

ವರುಣಾದಿಂದ ಸಿದ್ದರಾಮಯ್ಯ

ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ ಎಂಬ ಗೊಂದಲ ಮುಗಿದಿದೆ. ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟವಾಗಿದ್ದು, ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಅವರು ಸ್ಪರ್ಧಿಸಬಯಸಿದ್ದ ಕೋಲಾರ ಮತ್ತು ಸ್ಪರ್ಧಿಸಬಹುದು ಎನ್ನಲಾಗಿದ್ದ ಕೋಲಾರ ಮತ್ತು ಬಾದಾಮಿ ಕ್ಷೇತ್ರಗಳಿಗೆ ಈ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಕೋಲಾರದಿಂದ ಸ್ಪರ್ಧೆ ಬೇಡ ಎಂದು ಹೈಕಮಾಂಡ್ ಸೂಚಿಸಿದ ಬಳಿಕ ಕ್ಷೇತ್ರದ ವಿಚಾರವಾಗಿ ಗೊಂದಲ ಮೂಡಿತ್ತು. ಇವೆಲ್ಲದರ ನಡುವೆಯೇ ಬಾದಾಮಿಯಲ್ಲಿ ಬೃಹತ್ ರೋಡ್ ಶೋ ಕೂಡ ನಡೆಸಿದ್ದರು. ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ ವಿಚಾರ ಬಗೆಹರಿಯದೆ ಇದ್ದುದು ಬಿಜೆಪಿಗೆ ಒಂದು ಅಸ್ತ್ರವಾಗಿಯೂ ಸಿಕ್ಕಂತಾಗಿತ್ತು. ಈಗ ಎಲ್ಲದಕ್ಕೂ ತೆರೆಬಿದ್ದಿದೆ.

ಮೀಸಲಾತಿ ತಂತ್ರ

ಎಸ್‌ಸಿ ಸಮುದಾಯಕ್ಕೆ ರಾಜ್ಯ ಸರಕಾರ ಒಳಮೀಸಲಾತಿ ಪ್ರಕಟಿಸಿದೆ. ಇದೇ ವೇಳೆ 2ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ರದ್ದುಗೊಳಿಸಲಾಗಿದ್ದು, ಅವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದ(ಇಡಬ್ಲುಎಸ್) ಅಡಿಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಎಸ್‌ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಆದಿಜಾಂಬವ ಸಮುದಾಯಕ್ಕೆ ಶೇ. 6, ಆದಿಕರ್ನಾಟಕ ಸಮುದಾಯಕ್ಕೆ ಶೇ. 5.5, ಬಂಜಾರ, ಬೋವಿ, ಕೊರಚರಿಗೆ ಶೇ. 4.5, ಇತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ಸರಕಾರ ನಿರ್ಧರಿಸಿದೆ. ಇನ್ನು 2ಸಿ ಅಡಿ ಒಕ್ಕಲಿಗರಿಗೆ ಶೇ. 6ರಷ್ಟು ಮೀಸಲಾತಿ ಹಾಗೂ 2ಡಿ ಅಡಿ ಲಿಂಗಾಯತರಿಗೆ ಶೇ. 7ರಷ್ಟು ಮೀಸಲಾತಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಎರಡು ಬೃಹತ್ ಸಮುದಾಯಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಸರಕಾರ ಮಾಡಿದೆ.

ಕಾಂಗ್ರೆಸ್ ‘ಗ್ಯಾರಂಟಿ’

ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ದರು. ಬೆಳಗಾವಿಯಲ್ಲಿ ಯುವಕ್ರಾಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ನಂ. 4 ಘೋಷಣೆ ಮಾಡಿದರು. ಯುವನಿಧಿ ಹೆಸರಿನಲ್ಲಿ ಪದವಿ ಪಡೆದ ಯುವಜನತೆಗೆ ಮಾಸಿಕ 3,000 ರೂ. ನಿರುದ್ಯೋಗ ಭತ್ತೆ ಘೋಷಿಸಿದರು. ಈಗಾಗಲೇ ಗೃಹಜ್ಯೋತಿ, ಗೃಹಲಕ್ಷ್ಮೀ, 10 ಕೆಜಿ ಅಕ್ಕಿ ಘೋಷಣೆ ಆಗಿದೆ. ಜೆಡಿಎಸ್ ಪಂಚರತ್ನ ಹೆಸರಲ್ಲಿ ಭರವಸೆ ನೀಡುತ್ತಿದ್ದರೆ, ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಭರವಸೆ ನೀಡುತ್ತಿದೆ. ಈ ನಡುವೆ ಬಿಜೆಪಿಯದ್ದು ಚಿಂತಾಜನಕ ಸ್ಥಿತಿ. ಹೇಳಿಕೊಳ್ಳುವುದಕ್ಕೂ ಅಭಿವೃದ್ಧಿ ಕಾರ್ಯಗಳಿಲ್ಲ. ಧರ್ಮ ದಂಗಲ್‌ಗೆ ಜನರ ಪ್ರತಿಕ್ರಿಯೆ ಸಿಗುತ್ತಿಲ್ಲ. ಉಚಿತ ಯೋಜನೆಗಳ ಸಾಧಕ ಬಾಧಕ ಪಕ್ಕಕ್ಕಿಟ್ಟು ನೋಡಿದರೆ ಕಾಂಗ್ರೆಸ್ ಎಲ್ಲ ವರ್ಗವನ್ನು ತಲುಪುವ ಪ್ರಯತ್ನದಲ್ಲಿರುವುದು ಸ್ಪಷ್ಟ.

ಉರಿಗೌಡ-ನಂಜೇಗೌಡ ವಿಚಾರ

ಮಂಡ್ಯ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸೆಳೆಯಲು ಸೃಷ್ಟಿಯಾದ ಉರಿಗೌಡ-ನಂಜೇಗೌಡ ವಿಚಾರವಾಗಿ ಆದಿಚುಂಚನಗಿರಿಶ್ರೀಗಳು ಪ್ರತಿಕ್ರಿಯಿಸಿದರು. ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಮತ್ತು ಸಮುದಾಯಕ್ಕೆ ಅಪಖ್ಯಾತಿ ತರಬಾರದು ಎಂದು ಸೂಚಿಸಿದರು. ಇತಿಹಾಸದಲ್ಲಿ ಸಮರ್ಪಕ ಉಲ್ಲೇಖ ಸಿಕ್ಕಿದರೆ ಅವುಗಳನ್ನು ಆದಿಚುಂಚನಗಿರಿ ಮಠಕ್ಕೆ ತಂದು ಒಪ್ಪಿಸಲಿ. ಎಲ್ಲವನ್ನೂ ಕ್ರೋಡೀಕರಿಸಿ, ಪರಿಶೀಲಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು. ಸಮುದಾಯದ ಹಿತಕಾಯುವುದು ಹೇಗೆ ಎನ್ನುವುದನ್ನು ಆದಿಚುಂಚನಗಿರಿ ಶ್ರೀಗಳು ತೋರಿಸಿದರು. ಅವರ ಪ್ರತಿಕ್ರಿಯೆ ಅತ್ಯಂತ ಪ್ರೌಢಿಮೆ ಮತ್ತು ತೂಕದಿಂದ ಕೂಡಿತ್ತು. ಇದರಿಂದ ಮುನಿರತ್ನ ಚಿತ್ರ ಸೆಟ್ಟೇರುವ ಮೊದಲೇ ನೆಲಕಚ್ಚಿದರೆ, ಹಳೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸು ವೃದ್ಧಿಸುವ ಬಿಜೆಪಿ ಕನಸು ನುಚ್ಚು ನೂರಾಯಿತು. ಒಂದು ಕಡೆ ಲಿಂಗಾಯತರ ಕೋಪ, ಇನ್ನೊಂದು ಕಡೆ ಒಕ್ಕಲಿಗರ ಕೋಪ ನಡುವೆ ಸಿಕ್ಕಿ ಬಿಜೆಪಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೂ ಅಚ್ಚರಿ ಇಲ್ಲ. ಈ ನಡುವೆ ಒಂದು ಟ್ವೀಟ್‌ಗಾಗಿ ನಟ ಚೇತನ್ ಅವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಉರಿಗೌಡ-ನಂಜೇಗೌಡ ಸುಳ್ಳು, ಹಿಂದುತ್ವ ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು ಎಂದು ಟ್ವೀಟ್ ಮಾಡಿದ್ದೇ ತಪ್ಪಾಯಿತು.

‘ಕೈ’ ತಪ್ಪಿದ ಕಲಬುರಗಿ ಪಾಲಿಕೆ

ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಪಾಲಿಕೆ ಅಧಿಕಾರ 13 ವರ್ಷಗಳ ಬಳಿಕ ಬಿಜೆಪಿ ತೆಕ್ಕೆಗೆ ಹೋಗಿದೆ. ಕಾಂಗ್ರೆಸ್ ಕೋಟೆ ಕಲಬುರಗಿಯಲ್ಲಿ ಗಟ್ಟಿಯಾಗಿ ನೆಲೆಯೂ ರುತ್ತಿರುವ ಬಿಜೆಪಿ ಈಗ ಕಲಬುರಗಿ ಪಾಲಿಕೆಯನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದೊಂದೇ ಮತದ ಅಂತರದಲ್ಲಿ ಮೇಯರ್, ಉಪಮೇಯರ್ ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. ಸುಲಭವಾಗಿ ಅಧಿಕಾರಕ್ಕೇರಲು ಇದ್ದ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿರುವುದಕ್ಕೆ ಅಲಕ್ಷವೇ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ನಿರಂತರ ಸಭೆಗಳನ್ನು ಮಾಡುತ್ತ ತಂತ್ರ ರೂಪಿಸುತ್ತಿದ್ದರೆ, ಕಾಂಗ್ರೆಸ್ ಮೇಯರ್, ಉಪಮೇಯರ್ ಸ್ಥಾನದ ಅಭ್ಯರ್ಥಿಗಳನ್ನು ಕೂಡ ಗುರುವಾರ ಬೆಳಗ್ಗೆಯೇ ನಿರ್ಧರಿಸಲಾಯಿತು. ಕಾಂಗ್ರೆಸ್‌ಗೆ ಯಾಕೆ ಇಷ್ಟೊಂದು ಮೈಮರೆವೋ ಗೊತ್ತಿಲ್ಲ. 

ರಾಹುಲ್‌ಗೆ ಶಿಕ್ಷೆ

2019ರ ಲೋಕಸಭೆ ಚುನಾವಣೆ ಭಾಷಣದಲ್ಲಿ ಮೋದಿ ಉಪನಾಮ ಬಳಕೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ 2 ವರ್ಷ ಶಿಕ್ಷೆ ವಿಧಿಸಿದೆ. ಅದರ ಬೆನ್ನಲ್ಲೇ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹ ಮಾಡಲಾಗಿದೆ. ಇದೊಂದು ರಾಜಕೀಯ ಪಿತೂರಿ, ನ್ಯಾಯಾಂಗದ ಮೂಲಕ ರಾಜಕೀಯ ಹಗೆತನ, ಸೇಡಿನ ಕ್ರಮ ಎಂದು ಕೇಜ್ರಿವಾಲ್ ಸೇರಿದಂತೆ ಇತರ ಪಕ್ಷಗಳ ನಾಯಕರು ಹರಿಹಾಯ್ದಿದ್ದಾರೆ. ಅದಾನಿ ವಿಚಾರದಲ್ಲಿ ಸಂಸತ್‌ನಲ್ಲಿ ರಾಹುಲ್ ಮಾತುಗಳು, ಲಂಡನ್‌ನಲ್ಲಿನ ಹೇಳಿಕೆ, ಭಾರತ್ ಜೋಡೊ ಯಾತ್ರೆ ಇವೆಲ್ಲವೂ ಬಿಜೆಪಿಯ ನಿದ್ದೆಗೆಡಿಸಿದಂತಿದೆ. ಅದರಲ್ಲೂ ಅದಾನಿ ವಿಚಾರದಲ್ಲಿ ರಾಹುಲ್ ವಾಗ್ದಾಳಿ ಎದುರಿಸಲು ಬಿಜೆಪಿ ಕಷ್ಟಪಡುತ್ತಿತ್ತು. ಈ ನಡುವೆ ಈ ಬೆಳವಣಿಗೆ ಸಹಜವಾಗಿಯೇ ಎಲ್ಲರ ಕಣ್ಣಿಗೆ ಇದೊಂದು ರಾಜಕೀಯ ಪ್ರೇರಿತ ಕ್ರಮದಂತೆ ಕಾಣಿಸುತ್ತಿದೆ. ರಾಹುಲ್ ಸದಸ್ಯತ್ವ ಅನರ್ಹತೆ ವಿಚಾರದಲ್ಲಿ ಕಾನೂನು ಅವಕಾಶಗಳ ಬಗ್ಗೆಯೂ ಚರ್ಚೆ ನಡೆದಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಹೇಳಿಕೆ ನೀಡಿದ ತಿಂಗಳ ಅಂತರದಲ್ಲಿ ಈ ಘಟನೆ ನಡೆದಿದೆ.

ಅಮೃತ್‌ಪಾಲ್ ಸಿಂಗ್ ಎಲ್ಲಿ?

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಸುದ್ದಿಯಲ್ಲಿದ್ದಾನೆ. ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿರುವ ಆತನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಈ ಖಾಲಿಸ್ತಾನಿ ತೀವ್ರಗಾಮಿ ಪಾಕಿಸ್ತಾನದ ಐಎಸ್‌ಐ ಜೊತೆ ನಿಕಟ ಸಂಪರ್ಕದಲ್ಲಿದ್ದ ಮಾಹಿತಿಯೂ ಇರುವುದಾಗಿ ವರದಿಗಳಿವೆ. ದೇಶದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಲು ಯತ್ನಿಸುತ್ತಿದ್ದಾನೆ ಎಂದೂ ಗುಪ್ತಚರ ವರದಿಗಳಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ, ಆತನ ಕುರಿತು ಟಿವಿ ಶೋ ನಡೆಸಿದ್ದ ಭಾರತೀಯ ಮೂಲದ ಕೆನಡಾ ಪತ್ರಕರ್ತನಿಗೆ ಬೆದರಿಕೆ ಕರೆಗಳು ಬಂದಿರುವುದಾಗಿಯೂ ವರದಿಗಳಿವೆ. ತಪ್ಪಿಸಿಕೊಂಡು ವಾರಗಳೇ ಕಳೆದರೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಕಲಿ ಪಿಎಂಒ

ಕಾಶ್ಮೀರದಲ್ಲಿ ನಕಲಿ ಪಿಎಂಒ ಬಂಧನವಾಗಿದೆ. ಪ್ರಧಾನಮಂತ್ರಿ ಕಾರ್ಯಾಲಯದ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡಿದ್ದ, ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಎಸ್‌ಯುವಿ ಸೌಲಭ್ಯಗಳನ್ನೂ ಹೊಂದಿದ್ದ, ಯಾವಾಗಲೂ ಪಂಚತಾರಾ ಹೊಟೇಲ್‌ಗಳಲ್ಲಿ ತಂಗುತ್ತಿದ್ದ ಈತ ಗುಜರಾತ್‌ನ ಕಿರಣ್ ಭಾಯ್ ಪಟೇಲ್ ಎಂದು ಗೊತ್ತಾಗಿದೆ. ಕಳೆದ ಫೆಬ್ರವರಿಯಲ್ಲೇ ಈತ ಕಾಶ್ಮೀರಕ್ಕೆ ಭೇಟಿ ನೀಡಿ, ಅಲ್ಲಿ ಪಿಎಂಒ ಎಂದು ಪೋಸು ಕೊಟ್ಟು, ಅಧಿಕಾರಿಗಳ ಸಭೆ ನಡೆಸಿದ್ದ. ಈಗ ಅನುಮಾನದಿಂದ ಪೊಲೀಸರು ತನಿಖೆ ನಡೆಸಿದಾಗ ನಕಲಿ ಎಂಬುದು ಬಯಲಾಗಿದೆ. ಈತನ ಟ್ವಿಟರ್ ಖಾತೆಯಲ್ಲಿ ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಘೇಲಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ ಎನ್ನಲಾಗಿದೆ. ನಕಲಿ ಎಂಬುದೇನೋ ಸರಿ, ಆದರೆ ಝಡ್ ಪ್ಲಸ್ ಭದ್ರತೆ ಸಿಕ್ಕಿದ್ದಾದರೂ ಹೇಗೆ?