ಭಟ್ಕಳ: ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ
ಭಟ್ಕಳ: ಕರ್ನಾಟಕ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮಾವಳ್ಳಿ-1 ಹಾಗೂ ಮಾವಳ್ಳಿ-2 (ಮುರ್ಡೇಶ್ವರ) ಗ್ರಾಮ ಪಂ. ಸಹಯೋಗದೊಂದಿಗೆ ಭಟ್ಕಳ ತಾಲೂಕು ಪಂ. ವತಿಯಿಂದ ಮತದಾರರ ಜಾಗೃತಿ ಜಾಥಾ ಮತ್ತು ಮಾನವ ಸರಪಣಿ ಮೂಲಕ ಮತದಾನದ ಮಹತ್ವವನ್ನು ಸಾರಿ ಹೇಳುವ ಕಾರ್ಯಕ್ರಮ ಜರುಗಿತು.
ಮುರ್ಡೇಶ್ವರದ ಓಲಗ ಮಂಟಪ ಸಮೀಪ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ “ಯುವ ಮತದಾರರು ಮತದಾನದಿಂದ ವಿಮುಖರಾಗುತ್ತಿರುವುದು ಪ್ರಜಾಪ್ರಭುತ್ವದ ಅಪಾಯದ ಮುನ್ಸೂಚನೆಯಂತೆ ತೋರುತ್ತಿದೆ. ಗರಿಷ್ಠ ಮತದಾನ ಪದ್ಧತಿ ನಮ್ಮ ಸಂವಿಧಾನದ ಆಶಯಗಳನ್ನ ಪೂರೈಸುತ್ತದೆ. ಪ್ರಜಾಪ್ರಭುತ್ವದ ಸೌಂದರ್ಯವು ಇದೇ ಆಗಿದೆ. ನಾಗರಿಕರು ಈ ಕುರಿತು ಆಸಕ್ತರಾಗಿ ಮತದಾನದತ್ತ, ಮತದಾರರನ್ನು ಮತಗಟ್ಟೆಗೆ ತರುವಲ್ಲಿ ಸಂಕಲ್ಪ ಮಾಡಬೇಕಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಸಹಾಯಕ ನಿರ್ದೇಶಕರಾದ ನಾಗರಾಜ ನಾಯ್ಕ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಕುಮಾರ ಮೊಗೇರ, ಅಪರ್ಣಾ ನಾಯ್ಕ, ಕಾರ್ಯದರ್ಶಿಗಳಾದ ಮಾರುತಿ ದೇವಾಡಿಗ, ಮಂಜುನಾಥ ಗೊಂಡ, ಅಣ್ಣಾ ನಾಯ್ಕ, ಗ್ರಾ.ಪಂ. ಸಿಬ್ಬಂದಿ, ತಾ.ಪಂ. ಸಿಬ್ಬಂದಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಎದುರಿನ ಬೀದಿಯಲ್ಲಿ ಮಾನವ ಸರಪಣಿ ರಚಿಸಿ ಘೋಷಣೆ ಕೂಗಲಾಯಿತು. ನಂತರ ಮುರ್ಡೇಶ್ವರ ಬೀದಿಗಳಲ್ಲಿ ಜಾಥಾ ನಡೆಸಿ ಜನಜಾಗೃತಿ ಮೂಡಿಸಲಾಯಿತು.