ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡುವವರ ವಿರುದ್ಧ ಕಠಿಣ ಕ್ರಮ ಏಕಿಲ್ಲ: ಸಿಖ್ಖರ ಉನ್ನತ ಸಂಘಟನೆ ಪ್ರಶ್ನೆ

ಸಿಖ್ ಯುವಕರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ 24 ಗಂಟೆಗಳ ಗಡುವು

Update: 2023-03-28 05:56 GMT
ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡುವವರ ವಿರುದ್ಧ  ಕಠಿಣ ಕ್ರಮ ಏಕಿಲ್ಲ: ಸಿಖ್ಖರ ಉನ್ನತ ಸಂಘಟನೆ ಪ್ರಶ್ನೆ
  • whatsapp icon

ಅಮೃತಸರ: ಖಾಲಿಸ್ತಾನಿ ತೀವ್ರವಾದಿ ಪ್ರಚಾರಕ  ಅಮೃತ್ ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ದಬ್ಬಾಳಿಕೆಗೆ ಸಂಬಂಧಿಸಿದಂತೆ ಭಗವಂತ್ ಮಾನ್ ಸರಕಾರ ಹಾಗೂ  ಕೇಂದ್ರದ ವಿರುದ್ಧ ಸಿಖ್ಖರ  ಉನ್ನತ ಸಂಘಟನೆ    ಅಕಾಲ್ ತಖ್ತ್ ತೀಕ್ಷಣ ಹೇಳಿಕೆ ನೀಡಿದ್ದು, “ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡುವವರ” ವಿರುದ್ಧ ಇದೇ ರೀತಿಯ ಕ್ರಮವನ್ನು ಏಕೆ ತೆಗೆದುಕೊಳ್ಳುವುದಿಲ್ಲ'' ಎಂದು ಪ್ರಶ್ನಿಸಿದೆ.

ಅಕಾಲ್ ತಖ್ತ್ ಜಥೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವರು ಪ್ರತ್ಯೇಕತಾವಾದಿ ಪ್ರಚಾರಕನ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಬಂಧಿಸಲ್ಪಟ್ಟ ಸಿಖ್ ಯುವಕರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ 24 ಗಂಟೆಗಳ ಗಡುವು ನೀಡಿದರು. ಪಂಜಾಬ್‌ನಲ್ಲಿನ ಪರಿಸ್ಥಿತಿಯನ್ನು ಚರ್ಚಿಸಲು ಬುದ್ಧಿಜೀವಿಗಳು, ವಕೀಲರು, ಪತ್ರಕರ್ತರು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ಒಳಗೊಂಡ ಸಿಖ್ ಸಂಘಟನೆಗಳ ಸಭೆಯನ್ನು ಉದ್ದೇಶಿಸಿ ಸಿಂಗ್  ಮಾತನಾಡುತ್ತಿದ್ದರು.

ಅಕಾಲ್ ತಖ್ತ್ ಸಿಖ್ಖರಿಗೆ ಅಧಿಕಾರದ ಅತ್ಯುನ್ನತ ಸ್ಥಾನವಾಗಿದೆ ಮತ್ತು ಅದರ ಜತೇದಾರ್ ಅವರ ಉನ್ನತ ವಕ್ತಾರರಾಗಿದ್ದಾರೆ.

ಅಮೃತಪಾಲ್ ಸಿಂಗ್ ಹಾಗೂ  ಅವರ ಖಾಲಿಸ್ತಾನದ ಬೇಡಿಕೆಯನ್ನು ಬೆಂಬಲಿಸಿದ ಆರೋಪದ ಮೇಲೆ ಬಂಧಿಸಿದವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(NSA) ಯನ್ನು ಏಕೆ ಅನ್ವಯಿಸಲಾಗಿದೆ ಎಂದು ಪ್ರಶ್ನಿಸಿದ ಅವರು, "ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿಡುವ ಲಕ್ಷಾಂತರ ಜನರಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ಅವರನ್ನೂ ಸಹ NSA ಅಡಿಯಲ್ಲಿ ಬಂಧಿಸಬೇಕು''  ಎಂದು ಆಗ್ರಹಿಸಿದರು.

ಯಾವುದೇ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದಲ್ಲಿ ಕಸ್ಟಡಿಗೆ ತೆಗೆದುಕೊಂಡವರನ್ನು ಬಿಡುಗಡೆ ಮಾಡುವಂತೆ ರಾಜ್ಯ ಪೊಲೀಸರನ್ನು ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಮಾನ್ ಹೇಳಿದ್ದಾರೆ. ಆದರೆ, ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲ್ಪಟ್ಟ  353 ಮಂದಿಯಲ್ಲಿ 197 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

Similar News