ಚುನಾವಣೆಗೆ ಹೊಸ ಇವಿಎಂ ಬಳಕೆ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ ► ಮನೆಯಿಂದ ಮತದಾನ ಹೇಗೆ?

Update: 2023-03-29 16:47 GMT

ಬೆಂಗಳೂರು, ಮಾ.29: ‘ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಾಂಕ ನಿಗದಿ ಹಿನ್ನೆಲೆ ಮತದಾನ ಪ್ರಕ್ರಿಯೆ ವೇಳೆ ಈ ಬಾರಿ ಹೊಸ ವಿದ್ಯುನ್ಮಾನ ಮತಚಲಾವಣೆ ಯಂತ್ರಗಳನ್ನು (ಇವಿಎಂ ಯಂತ್ರ) ಬಳಕೆ ಮಾಡಲಾಗುವುದು. ಜತೆಗೆ, 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

ಬುಧವಾರ ನಗರದ ರಾಜ್ಯ ಚುನಾವಣಾ ಆಯೋಗ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಮೇ 10ರಂದು ನಡೆಯಲಿರುವ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಂದು ಒಟ್ಟು 58,282 ಮತಗಟ್ಟೆಗಳಲ್ಲಿ ಬ್ಯಾಲೆಟ್ ಯನಿಟ್ 1,15,709, ಕಂಟ್ರೋಲ್ ಯುನಿಟ್ 82,543, ವಿವಿಪ್ಯಾಟ್ 89,379 ಬಳಸಲಾಗುವುದು. ಇವೆಲ್ಲಾವೂ ಹೊಸದಾಗಿದ್ದು, ಹೈದರಾಬಾದ್ ಮೂಲದ ಸಂಸ್ಥೆ ತಯಾರಿಸಿದೆ’ ಎಂದರು.

‘ಎಲ್ಲರಿಗೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ. ಆದರೂ, ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾದೇ ಇರುವ ಮತದಾರರಿಗೆ ವಿಎಫ್‍ಎಚ್(ಮನೆಯಿಂದಲೇ ಮತದಾನ) ವಿಶೇಷಸೌಲಭ್ಯವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಪಾರದರ್ಶಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಮತಗಟ್ಟೆ: ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳಿವೆ. ವಿಶೇಷವಾಗಿ 1,320 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅದೇ ರೀತಿ, ಈ ಬಾರಿ 224 ವಿಶೇಷಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ರಾಜ್ಯದ ಸುಮಾರು 1200 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿದ್ದು ಇವುಗಳ ನಿರ್ವಹಣೆಗೆ ಹೆಚ್ಚಿನ ಭದ್ರತೆಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

‘ರಾಜ್ಯದ ಶೇ.50 ರಷ್ಟು ಮತಗಟ್ಟೆಗಳು ವೆಬ್‍ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ. ಚುನಾವಣಾ ಆಯೋಗದ ಪ್ರಯತ್ನದಿಂದ ಈ ಬಾರಿ 9.17 ಲಕ್ಷ ಮಂದಿ ಮೊದಲ ಬಾರಿಯ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅಲ್ಲದೇ, ಅಡ್ವಾನ್ಸ್ ಅಪ್ಲಿಕೇಷನ್ ಸೌಲಭ್ಯದ ಮೂಲಕ ಈಗಾಗಲೇ 1.25 ಲಕ್ಷ ಯುವಕರು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 41,000 ಮತದಾರರು ಎ.1ರಿಂದ ಮತದಾನಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮತದಾನದ ಮಹತ್ವದ ಬಗ್ಗೆ ಇವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ನುಡಿದರು.

ಅಕ್ರಮ ಮದ್ಯ, ನಗದು ಜಪ್ತಿ: ಮತದಾರರಿಗೆ ಆಮಿಷವೊಡ್ಡುವ ಆರೋಪ ಸಂಬಂಧ ಈಗಾಗಲೇ ರಾಜ್ಯದ ಎಲ್ಲೆಡೆ 57.72 ಕೋಟಿ ರೂ. ಮೌಲ್ಯದ ಮದ್ಯ, ನಗದು, ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಇಲಾಖೆ ವಶಪಡಿಸಿದ ಅಕ್ರಮ ನಗದು, ಮದ್ಯ, ಇತರೆ ವಸ್ತುಗಳ ಮೌಲ್ಯ 34.36 ಕೋಟಿ ರೂ., ಈ ಪೈಕಿ ನಗದು 14.24 ಕೋಟಿ, 530 ಕೆಜಿ ಮಾದಕ ವಸ್ತು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ  ಸೇರಿದಂತೆ ಒಟ್ಟು 11.20 ಕೋಟಿ ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಅಬಕಾರಿ ಇಲಾಖೆ ಒಟ್ಟು 6.84 ಕೋಟಿ ಮೌಲ್ಯದ 1.38 ಲಕ್ಷ ಲೀಟರ್ ಮದ್ಯ ವಶಕ್ಕೆ ಪಡೆದಿದೆ.ಆದಾಯ ತೆರಿಗೆ ಇಲಾಖೆ ಒಟ್ಟು 1.16 ಕೋಟಿ ನಗದು,  ವಾಣಿಜ್ಯ ಇಲಾಖೆಯಿಂದ 5.2 ಕೋಟಿ ರೂ. ಒಟ್ಟು ಮೌಲ್ಯದ ವಸ್ತುಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ಒಟ್ಟು57.72 ಕೋಟಿ ಮೌಲ್ಯದ ವಸ್ತುಗಳು, ಉಡುಗೊರೆ, ಮದ್ಯ, ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ, ಮಾ.9ರಿಂದ ಇದುವರೆಗೂ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 1,985 ಎಫ್‍ಐಆರ್‍ಗಳು ದಾಖಲಾಗಿವೆ ಎಂದು ವಿವರಿಸಿದರು.

ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ. ಈ ಸಂಬಂಧ 2,040 ಫ್ಲೈಯಿಂಗ್ ಸ್ಕ್ವಾಡ್, 2605 ಸ್ಟಾಟಿಕ್ ಪರಿವೀಕ್ಷಣಾ ತಂಡ, 2605 ಸ್ಥಿರ ಕಣ್ಗಾವಲು ತಂಡ, 266 ವಿಡಿಯೊ ವೀಕ್ಷಣಾ ತಂಡ, 631 ವಿಡಿಯೊ ಪರಿವೀಕ್ಷಣಾ ತಂಡ, 225 ಲೆಕ್ಕಪರಿಶೋಧಕ ತಂಡ  ರಚಿಸಲಾಗಿದೆ. ಹಾಗೇ, ಒಟ್ಟು 942 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಈ ಪೈಕಿ 171 ಅಂತರ ರಾಜ್ಯ ಗಡಿ ಚೆಕ್‍ಪೋಸ್ಟ್ ಗಳುಸ್ಥಾಪನೆಯಾಗಿವೆ ಎಂದು ಅವರು ಮಾಹಿತಿ ನೀಡಿದರು.

ಒಟ್ಟು ಮತದಾರರ ಮಾಹಿತಿ

-ಒಟ್ಟು ಮತದಾರರು-5,24,11,557

-ಪುರುಷರು-2,63,32,445

-ಮಹಿಳೆಯರು-2,60,26,752

-ಸೇವಾ ಮತದಾರರು-47,609

-ಯುವ ಮತದಾರರು-9,58,806

-80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಮತದಾರರು-12,15,142

-ದಿವ್ಯಾಂಗ ಮತದಾರರು-5,60,908

-ತೃತೀಯ ಲಿಂಗಿಗಳು-4,751

‘ಅತಿಹೆಚ್ಚು ಮತದಾರರು ಹೊಂದಿರುವ ಕ್ಷೇತ್ರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿ ಒಟ್ಟು 6,77,247 ಮತದಾರರಿದ್ದಾರೆ. ಇನ್ನೂ ಅತಿ ಕಡಿಮೆ ಮತದಾರರು ಇರುವ ಕ್ಷೇತ್ರ ಶೃಂಗೇರಿ ಆಗಿದ್ದು, ಇಲ್ಲಿ 1,68,564 ಮತದಾರರಿದ್ದಾರೆ. ಹಾಗೇ ಅತಿ ಹೆಚ್ಚು ಮತಗಟ್ಟೆಗಳು ಬೆಳಗಾವಿಯಲ್ಲಿದ್ದು, ಇಲ್ಲಿ 4434 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಕೊಡುಗೆ ಜಿಲ್ಲೆಯಲ್ಲಿ ಬರೀ 542 ಮತಗಟ್ಟೆಗಳಿವೆ’ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು. 

ಪತ್ರಕರ್ತರಿಗೂ ಅವಕಾಶ: ‘ಮಾನ್ಯತೆ ಪಡೆದ ಪತ್ರಕರ್ತರಿಗೆ ಮೊದಲ ಬಾರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ವಾರ್ತಾ ಇಲಾಖೆಯಿಂದ ಈ ಕುರಿತಾದ ಪಟ್ಟಿಯನ್ನು ಚುನಾವಣಾ ಆಯೋಗ ಪಡೆಯಲಿದೆ. ಪಟ್ಟಿಯಲ್ಲಿ ಹೆಸರು ಇರುವ ಪತ್ರಕರ್ತರಿಗೆ ಚುನಾವಣಾ ದಿನಾಂಕದ ಮೊದಲು ಅಂಚೆ ಮತದಾನ ಮಾಡಲು ಅವಕಾಶ ಇದೆ’

ಮನೆಯಿಂದ ಮತದಾನ ಹೇಗೆ?: ‘80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ದಿವ್ಯಾಂಗರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ. ಅರ್ಹರು 12 ‘ಡಿ’ ಅಡಿ ಅರ್ಜಿ ಸಲ್ಲಿಸಬಹುದಾಗಿದೆ. ಎಪ್ರಿಲ್ 13ರ ಅಧಿಸೂಚನೆ ಹೊರಡಿಸಿದ ಬಳಿಕ ಚುನಾವಣಾ ದಿನಾಂಕದ 5 ದಿನಗಳ ಒಳಗೆ 12ಡಿಯಲ್ಲಿ ಅಸಮರ್ಥ ಪ್ರಮಾಣ ಪತ್ರದೊಂದಿಗೆ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಆನಂತರ, ಚುನಾವಣಾ ಅಧಿಕಾರಿಗಳ ತಂಡ ಅರ್ಜಿ ಪರಿಶೀಲಿಸಲಿದ್ದಾರೆ. ಮನೆಗೆ ಹೋಗಿ ಅವರು ಅರ್ಹರೇ ಎಂದು ಪರಿಶೀಲಿಸುತ್ತಾರೆ. ತದನಂತರ ಮತದಾನಕ್ಕೆ ಅವಕಾಶ ಕಲ್ಪಿಸುತ್ತೇವೆ. ಇಬ್ಬರು ಮತಗಟ್ಡೆ ಅಧಿಕಾರಿಗಳು, ವಿಡಿಯೋ ಗ್ರಾಫರ್, ಭದ್ರತಾ ಸಿಬ್ಬಂದಿ ಮತದಾರನ ಮನೆಗೆ ತೆರಳಿ ಮತವನ್ನ ಗೌಪ್ಯವಾಗಿ ಅಂಚೆ ಮತಪತ್ರದಲ್ಲಿ ಸಂಗ್ರಹಿಸಲಿದ್ದಾರೆ’

ಎಚ್ಚರಿಕೆ: ‘ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುವ ಕುರಿತಾದ ದೂರು ಬಂದರೆ ಅಂತವರನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಬೇಡಿಕೆಗೆ ಸ್ಪಂದನೆ?: ‘ಈ ಬಾರಿಯ ಚುನಾವಣೆಯಲ್ಲಿ ಬೇರೆ ರಾಜ್ಯಗಳಲ್ಲಿ ಬಳಕೆ ಮಾಡಿದ ಇವಿಎಂ ಯಂತ್ರಗಳನ್ನು ಕರ್ನಾಟಕ ಚುನಾವಣೆಯಲ್ಲಿ ಬಳಕೆ ಮಾಡಬಾರದು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೊಸ ಮತಯಂತ್ರಗಳನ್ನೇ ರಾಜ್ಯ ಚುನಾವಣೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ’

ಕನಿಷ್ಠ ಮೂಲಭೂತ ಸೌಕರ್ಯ: ‘ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಮತಗಟ್ಟೆಗಳಲ್ಲೂ ಕನಿಷ್ಠ ಮೂಲಭೂತ ಸೌಕರ್ಯ ನೀಡಲು ಚುನಾವಣಾ ಆಯೋಗ ಮುಂದಾಗಿದೆ. ಅಂಗವಿಕಲರು, ವೃದ್ಧರಿಗಾಗಿ ರ್ಯಾಂಪ್ ಸೌಲಭ್ಯವನ್ನು ಶೇ. 98.63 ಮತಗಟ್ಟೆಗಳಲ್ಲಿ ರೂಪಿಸಲಾಗಿದೆ. ಕುಡಿಯುವ ನೀರು ಶೇ.99.86, ವಿದ್ಯುತ್ ಸಂಪರ್ಕ ಶೇ. 99.55, ಪೀಠೋಪಕರಣಗಳು ಶೇ.99.84, ಕಾಯುವ ಕೊಠಡಿಗಳು ಶೇ.99.45, ಪುರುಷರ ಶೌಚಾಲಯ ಶೇ.98.41, ಮಹಿಳೆಯರ ಶೌಚಾಲಯ ಶೇ.98.10, ಮಾರ್ಗಸೂಚಿ ಫಲಕಗಳನ್ನು ಶೇ.98.36 ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ. ಮತಗಟ್ಟೆ ಸ್ಥಾಪನೆಗೆ ಇನ್ನೂ ಸಮಯ ಇರುವುದರಿಂದ ಶೇ. 100 ಮತಗಟ್ಟೆಗಳಲ್ಲೂ ಕನಿಷ್ಠ ಮೂಲಸೌಕರ್ಯ ನೀಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

Similar News