'ಕೋಮು ರಾಜಕೀಯ ನಿಲ್ಲಿಸಿ, ಅಭಿವೃದ್ಧಿಯತ್ತ ಗಮನ ನೀಡಿ': ನಾಗರಿಕ ಸಮಾಜ ವೇದಿಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ

Update: 2023-04-01 14:58 GMT

ಬೆಂಗಳೂರು, ಎ.1: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ನಾಗರಿಕ ಸಮಾಜ ವೇದಿಕೆಯು ಚುನಾವಣೆಗೆ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕೋಮು ರಾಜಕೀಯ ನಿಲ್ಲಿಸುವ ಜೊತೆಗೆ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಆಗ್ರಹಿಸಿದೆ.

ಶನಿವಾರ ನಗರದ ದಾರುಸ್ಸಲಾಂ ಸಭಾಂಗಣದಲ್ಲಿ 38 ಸಂಘಟನೆಗಳ ಜತೆಗೂಡಿ ನಾಗರಿಕ ಸಮಾಜ ವೇದಿಕೆ ಹೊರತಂದಿರುವ ಪ್ರಣಾಳಿಕೆಯನ್ನು ಇತಿಹಾಸಕಾರ ರಾಮಚಂದ್ರ ಗುಹಾ ಬಿಡುಗಡೆ ಮಾಡಿದರು. 

ನಂತರ ಪ್ರಣಾಳಿಕೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಧಾನಸಭಾ  ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದಲೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಸ್ಪರ್ಧಿಸಿದ್ದಾರೆ. ಮುಂದೆ ಅವರೇ ಆಯ್ಕೆಯಾಗುತ್ತಾರೆ. ಅಂತಹವರಿಂದ ಉತ್ತಮ ಅಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕಾದ ಜವಾಬ್ದಾರಿ ಮತದಾರರ ಮೇಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಆಯಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಜನಸಾಮಾನ್ಯರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂಬುದು ಸೇರಿದಂತೆ ಭ್ರಷ್ಟಾಚಾರ ಮುಕ್ತ ಆಡಳಿತ, ಉದ್ಯೋಗ ಖಾತ್ರಿ, ಕೃಷಿ ಸ್ವಾವಲಂಬನೆ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮೊದಲಾದ ಅಂಶಗಳನ್ನು ವೇದಿಕೆ ಉಲ್ಲೇಖಿಸಿದ್ದು, ಇದನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಕಾರ್ಯ ರೂಪಕ್ಕೆ ತರಬೇಕು ಎಂದು ಅವರು ಹೇಳಿದರು.

ವಿಧಾನ ಪರಿಷತ್ತಿನ ಕಾಂಗ್ರೆಸ್‍ನ ಮಾಜಿ ಸದಸ್ಯ ಧರ್ಮಸೇನ ಮಾತನಾಡಿ, ಭವಿಷ್ಯದ ನೆಮ್ಮದಿಯ ಬದುಕಿಗೆ ಬೇಕಾದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ವಿಷಯಗಳು ವಿಧಾನಸಭಾ ಚುನಾವಣೆಯ ಪ್ರಮುಖ ವಿಷಯಗಳಾಗಬೇಕು. ಮನುಷ್ಯ ಗೌರವಯುತವಾಗಿ ಜೀವಿಸಲು ಅಗತ್ಯವಾದ ಶಿಕ್ಷಣ, ಉದ್ಯೋಗ, ಆರೋಗ್ಯ, ಆಹಾರ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳು ಪ್ರಮುಖ ವಿಷಯವಾಗಿ ಚರ್ಚೆಯಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಅಶ್ವಿನ್ ಮಹೇಶ್, ಸಿಪಿಐ(ಎಂ) ನಾಯಕ ಎಸ್.ವೈ.ಗುರುಶಾಂತ್ ಸೇರಿದಂತೆ ಪ್ರಮುಖರಿದ್ದರು.

''ಲೈಂಗಿಕ ಅಲ್ಪಸಂಖ್ಯಾತರ ಅಂಶ ಕೈಬಿಟ್ಟರು..''

ಪ್ರಣಾಳಿಕೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪ್ರಗತಿ ಕುರಿತ ಅಂಶಗಳನ್ನು ಕೈಬಿಟ್ಟಿದಕ್ಕೆ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ದಿನನಿತ್ಯ ತೊಂದರೆ ಅನುಭವಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರು ಅಭಿವೃದ್ಧಿಯಾಗಬೇಕು. ಅವರು ಸಹ ಈ ಸಮಾಜದ ಪ್ರಮುಖ ಭಾಗವಾಗಿ ದ್ದಾರೆ ಎಂದು ಅವರು ನುಡಿದರು.

"ನಾಗರಿಕ ಸಮಾಜ ಒಪ್ಪಲ್ಲ''

ಬಿಜೆಪಿಯು ಒಂದು ರಾಷ್ಟ್ರ, ಒಂದು ಭಾಷೆ ಒಂದು ಸಂಸ್ಕೃತಿ ಎನ್ನುತ್ತಿದೆ.ಆದರೆ, ಇದು ನಾಗಪುರದ ಆಸಕ್ತಿಯಾಗಿದೆ.ಇದನ್ನು ನಾಗರಿಕ ಸಮಾಜ ಎಂದೂ ಸಹ ಒಪ್ಪಲು ಅರ್ಹವಲ್ಲ. ಇನ್ನೂ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರಿಂದ ಭಾರೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಮಚಂದ್ರ ಗುಹಾ ನುಡಿದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು..!

* ಎಲ್ಲ್ಲ ಮೂಲಭೂತ ಹಕ್ಕುಗಳು ಮತ್ತು ಆಹಾರ, ನೀರು, ವಸತಿ, ಶಿಶುಪಾಲನೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯನ್ನು ಸಾರ್ವತ್ರಿಕಗೊಳಿಸಬೇಕು

*ಸರಕಾರದಲ್ಲಿ ಎಲ್ಲ ಖಾಲಿ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಬೇಕು

*ಸರಕಾರದ ಎಲ್ಲ ನಿಯಮಿತ ಹುದ್ದೆಗಳ ಗುತ್ತಿಗೆಯನ್ನು ನಿಲ್ಲಿಸಬೇಕು

* ಕ್ರಿಮಿನಲ್ ಆರೋಪಗಳಿಗೆ ಗಂಭೀರ ಆರೋಪ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು

*ದ್ವೇಷ ಭಾಷಣದಲ್ಲಿ ತೊಡಗುವವರನ್ನು ಮತ್ತು ಕೋಮು ವಿಭಜಕ ಭಾಷಣ, ನರಮೇಧ ಮತ್ತು ಹಿಂಸಾಚಾರಕ್ಕೆ ಕರೆ ನೀಡುವುದು,

*ಕಾನೂನನ್ನು ಅವರ ಕೈಗೆ ತೆಗೆದುಕೊಳ್ಳುವುದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹರ ಮೇಲೆ ಪಕ್ಷದ ನಿಯಮಗಳ ಅಡಿಯಲ್ಲಿ ಪಕ್ಷದ ಸ್ಥಾನದಿಂದ ತೆಗೆದುಹಾಕಬೇಕು

* ಬೆಂಬಲಕ್ಕಾಗಿ ಧಾರ್ಮಿಕ ನಾಯಕರ ಸಹಾಯ ತೆಗೆದುಕೊಳ್ಳಬಾರದು.

Similar News