ಹರೇಕಳ-ಅಡ್ಯಾರ್ ಸೇತುವೆ: ಡಿವೈಎಫ್‌ಐ ನೇತೃತ್ವದಲ್ಲಿ ಗೇಟಿನ ಬೀಗ ಒಡೆದು ಸಂಚಾರಕ್ಕೆ ಅವಕಾಶ

ಲಘು ವಾಹನಗಳ ಸಂಚಾರ ಆರಂಭ

Update: 2023-04-04 13:36 GMT

ಕೊಣಾಜೆ : ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಎರಡೂ ಕಡೆಗಳಲ್ಲಿ ಗೇಟು ನಿರ್ಮಿಸಿ ಹಾಕಲಾಗಿದ್ದ ಬೀಗವನ್ನು ಆಕ್ರೋಶಿತ ಸಾರ್ವಜನಿಕರ ಸಹಕಾರದಿಂದ ಮಂಗಳವಾರ ಬೆಳಗ್ಗೆ ಡಿವೈಎಫ್‌ಐ ಕಾರ್ಯಕರ್ತರು ಒಡೆದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರೊಂದಿಗೆ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳು ಓಡಾಟ ಆರಂಭಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಅನುಪಸ್ಥಿತಿ ಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸಲು ಸಾಧ್ಯವಾಗದ್ದರಿಂದ ಎ.1ರಿಂದ ವಾಹನಗಳ ಸಂಚಾರ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ  ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಅಲ್ಲದೆ ಎ.3ರಂದು ವಾಹನಗಳ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಉಳ್ಳಾಲ ತಾಲೂಕು ಡಿವೈಎಫ್‌ಐ ಸಮಿತಿಯು ಸಂಚಾರ ಮುಕ್ತಗೊಳಿಸಬೇಕು ಎಂದು ಸೋಮವಾರ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು.

ಆದರೆ ಅದಕ್ಕೂ ಸೂಕ್ತ ಸ್ಪಂದನ ಸಿಗದ ಕಾರಣ ಆಕ್ರೋಶಗೊಂಡ ಸ್ಥಳೀಯರ ಸಹಕಾರದಲ್ಲಿ ಡಿವೈಎಫ್‌ಐ ಮುಖಂಡರು ಮಂಗಳವಾರ ಬೆಳಗ್ಗೆ ಸೇತುವೆಯ ಎರಡೂ ಕಡೆಗಳಲ್ಲಿ ಅಳವಡಿಸಲಾಗಿದ್ದ ಗೇಟನ್ನು ಬೀಗ ಒಡೆದು ತೆರವುಗೊಳಿಸಿದ್ದಾರೆ. ಇದನ್ನೇ ಕಾಯುತ್ತಿದ್ದ ಸ್ಥಳೀಯರು ಸಂಭ್ರಮಿಸಿದರೆ, ವಾಹನಿಗರು ಮುಕ್ತವಾಗಿ ಸಂಚಾರ ಆರಂಭಿಸಿದ್ದಾರೆ.

ವಿಷಯ ತಿಳಿದ ಹರೇಕಳ ಗ್ರಾಮಸ್ಥರಲ್ಲದೆ ಪಾವೂರು, ಪಜೀರ್, ಬೋಳಿಯಾರು, ಕೊಣಾಜೆ ಗ್ರಾಮಗಳ ವಾಹನಿಗರು ಗ್ರಾಮಚಾವಡಿ, ನ್ಯೂಪಡ್ಪು ಮಾರ್ಗವಾಗಿ ಪಾವೂರು-ಹರೇಕಳ ಕಡವಿನ ಬಳಿಯಿಂದಾಗಿ ಸೇತುವೆ ಮೂಲಕ ರಾ.ಹೆ.75ರ ಅಡ್ಯಾರ್‌ನತ್ತ ಸಾಗಿ ಮಂಗಳೂರು- ಬಿಸಿ.ರೋಡ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಕಾರ್ಯಾಚರಣೆಯ ನೇತೃತ್ವವನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಉಳ್ಳಾಲ ತಾಲೂಕು ಸಮಿತಿಯ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಸಮಿತಿಯ ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್, ಹರೇಕಳ ಗ್ರಾಪಂ ಸದಸ್ಯ ಅಶ್ರಫ್, ಸ್ಥಳೀಯ ಪ್ರಮುಖರಾದ ಹೈದರ್ ಹರೇಕಳ, ಸತ್ತಾರ್ ಕೊಜಪಾಡಿ ಮತ್ತಿತರರು ವಹಿಸಿದ್ದರು.

ಅಧಿಕಾರಿಗಳ ಭೇಟಿ

ಪರಿಸ್ಥಿತಿಯ ಅವಲೋಕನಕ್ಕಾಗಿ ಚುನಾವಣಾಧಿಕಾರಿ, ತಹಶೀಲ್ದಾರ್, ಕಂದಾಯ ಅಧಿಕಾರಿ, ಗ್ರಾಮಕರಣಿಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ಪರಿಶೀಲನೆ ನಡೆಸಿ ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿದ್ದಾರೆ.

"ಸೇತುವೆಯ ಎರಡೂ ಕಡೆಗಳಲ್ಲಿ ರಸ್ತೆ ಕಾಮಗಾರಿಯು ಪೂರ್ಣಗೊಂಡಿತ್ತು. ಡಿವೈಎಫ್‌ಐ ವತಿಯಿಂದ ಕಳೆದ ನವೆಂಬರ್ ನಿಂದಲೇ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಇದೀಗ ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ ಸೇತುವೆಯ ಗೇಟುಗಳನ್ನು ತೆಗೆಯದೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿರಲಿಲ್ಲ. ಸೇತುವೆ ನಿರ್ಮಾಣದ ಬಳಿಕ ಇಲ್ಲಿ ದೋಣಿ ಸಂಚಾರವೂ ನಿಂತಿದ್ದು, ಜನರ ಪ್ರಯಾಣಕ್ಕೆ ಬಹಳಷ್ಟು ತೊಂದರೆಯಾಗಿತ್ತು. ಈ ಭಾಗದ ಜನರ ಸಮಸ್ಯೆಯನ್ನು ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಿತ್ತು. ಆದರೆ ಅಲ್ಲಿ ಸರಿಯಾದ ಸ್ಪಂದನ ಸಿಗದ ಕಾರಣ ನಾವು ಇಂದು ಬೀಗ ಮುರಿದು ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸಬೇಕಾಯಿತು".
-ರಫೀಕ್ ಹರೇಕಳ
ಅಧ್ಯಕ್ಷರು, ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ

"ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ನೀತಿ ಸಂಹಿತಿ ನೆಪವೊಡ್ಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಇದೀಗ ಡಿವೈಎಫ್‌ಐ ಗೇಟ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಇನ್ನು ಸೇತುವೆಯನ್ನು ಬಂದ್ ಮಾಡಿದರೆ ಹೋರಾಟ ತೀವ್ರ ಗೊಳಿಸಲಾಗುವುದು".
ಬಿ.ಕೆ.ಇಮ್ತಿಯಾಝ್
ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ

Similar News