ಮುಸ್ಲಿಮರ 2ಬಿ ಮೀಸಲಾತಿ ಮರುಸ್ಥಾಪಿಸಲು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ಮನವಿ

Update: 2023-04-05 14:53 GMT

ಭಟ್ಕಳ: ಮುಸ್ಲಿಮರಿಗೆ ನೀಡುತ್ತಿದ್ದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಬೇಕೆಂದು ಕೋರಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗದ ಸೌಲಭ್ಯಗಳಿಗೆ ಮೀಸಲಿರಿಸಿದ ಶೇ.4ರ ಪ್ರವರ್ಗ 2 ಬಿ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರಕಾರ ರದ್ದುಗೊಳಿಸಿ ಇತರ ಸಮುದಾಯಕ್ಕೆ ನೀಡಿದ ಕ್ರಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಈ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಂಡು ಶೇ.4 ಮೀಸಲಾತಿಯ ಬದಲಿಗೆ ಶೇ.7ಮೀಸಲಾತಿ ನೀಡಿ ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂವಿಧಾನ ಬದ್ಧವಾಗಿರುವ ಮುಸ್ಲಿಮ್ ಸಮುದಾಯದ 2ಬಿ ಮೀಸಲಾತಿಯನ್ನು ರಾಜ್ಯ ಸರಕಾರ ರದ್ದುಗೊಳಿಸಿರುವುದು ಮತೀಯ ತಾರತಮ್ಯ ಮತ್ತು ಸಮುದಾಯವನ್ನು ಶೈಕ್ಷಣಿಕ ಹಕ್ಕುಗಳಿಂದ ವಂಚಿಸುವ ಪ್ರಯತ್ನವಾಗಿದೆ. ಮುಸ್ಲಿಮರ ಹಕ್ಕನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಹಂಚಿರುವುದು ಅನ್ಯಾಯದ ಪರಮಾವಧಿಯಾಗಿದ್ದು, ರಾಜ್ಯ ಸರಕಾರ ತಕ್ಷಣ ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಬೇಕೆಂದು ತಿಳಿಸಲಾಗಿದೆ.

ಕರ್ನಾಟಕ ಸರಕಾರದಿಂದ ನೇಮಕಗೊಂಡ ಚಿನ್ನಪ್ಪರೆಡ್ಡಿ ಆಯೋಗವು 1990ರಲ್ಲಿ ತನ್ನ ವರದಿಯನ್ನು ನೀಡಿತು. ಈ ವರದಿ ಮತ್ತು ಅಂದಿನ ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಆಧರಿಸಿ ಕರ್ನಾಟಕ ಸರಕಾರವು 2ಎ (ಶೇ.15 ), 2ಬಿ ( ಶೇ.04), 3ಎ ( ಶೇ.4), 3ಬಿ (ಶೇ.5), ಪ್ರವರ್ಗ 1( ಶೇ 4) ರ ಗುಂಪುಗಳನ್ನು ರಚಿಸಿ ಹಿಂದುಳಿದ ಸಮುದಾಯಗಳಿಗೆ ಶೇ.32ರ ಮೀಸಲಾತಿಯನ್ನು ಕಲ್ಪಿಸಲಾಯಿತು. ಅಂದಿನ ಅಲ್ಪಸಂಖ್ಯಾತ ಆಯೋಗವು (ರಹಮಾನ್ಖಾನ್ ಅಧ್ಯಕ್ಷತೆ) ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಅಧ್ಯಯನ ಮಾಡಿ ಶೇ.6ರ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದ ಸರಕಾರ ಶೇ.6 ಮೀಸಲಾತಿಯನ್ನು ನೀಡಲು ಮುಂದಾಗಿದ್ದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇ.50ನ್ನು ಮೀರಬಾರದು ಎಂಬ ನ್ಯಾಯಾಲಯದ ಆದೇಶದಂತೆ ಮುಸ್ಲಿಮರಿಗೆ ಶೇ.4ನ್ನು ಮಿತಿಗೊಳಿಸಲಾಯಿತು. ಮುಂದೆ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಸರಕಾರ ಈ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದರು. ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸ್ಸು ಆಧರಿಸಿ ಸುಮಾರು 28 ವರ್ಷಗಳ ಹಿಂದೆ ಅನುಷ್ಠ್ಠಾನಗೊಂಡ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಮುಂದಾಲೋಚನೆಯಿಲ್ಲದೆ ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕೋಸ್ಕರ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಈ ಕುರಿತಂತೆ ಸಮುದಾಯದಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಆದ್ದರಿಂದ ಮುಸ್ಲಿಮರಿಗೆ ಇದುವರೆಗೂ ನೀಡುತ್ತಿದ್ದ ಶೇ.4ರ ಪ್ರವರ್ಗ 2ಬಿ ಅನ್ನು ಮುಂದುವರಿಸುವುದರ ಜೊತೆಗೆ ಮೀಸಲಾತಿಯಲ್ಲಿ ಶೇ.3ನ್ನು ಹೆಚ್ಚಿಸಿ ಒಟ್ಟು ಶೇ.7 ಮೀಸಲಾತಿಯನ್ನು ನೀಡಬೇಕೆಂದು ರಾಜ್ಯ ಸರಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಮುಖಂಡರು ಒತ್ತಾಯಿಸಿದ್ದಾರೆ.

ಉಪವಿಭಾಗಾಧಿಕಾರಿ ಮಮತಾ ದೇವಿ ಜಿ.ಎಸ್. ಮನವಿ ಪತ್ರವನ್ನು ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಮಾಜಿ ಅಧ್ಯಕ್ಷ ಎಸ್ ಎಂ ಪರ್ವಾಝ್, ಜೈಲಾನಿ ಶಾಬಂದ್ರಿ, ಅಲ್ತಾಫ್ ಖರೂರಿ , ಅಝೀಝ್ ರಹ್ಮಾನ್ ನದ್ವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು

Similar News