‘ಖಾಸಗಿ ಶಾಲಾ ಶುಲ್ಕ ನಿಗದಿಗೆ ಅಧಿಕಾರವಿಲ್ಲ’ ಎಂಬ ಆದೇಶ: ಸರಕಾರದಿಂದ ಸುಪ್ರೀಂಗೆ ಮೇಲ್ಮನವಿ ಅರ್ಜಿ
ಬೆಂಗಳೂರು, ಎ.5: ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ನಿಗದಿ ವಿಚಾರವಾಗಿ ಹೈಕೋರ್ಟ್ ನೀಡಿರುವ ಆದೇಶವನ್ನು ಶಿಕ್ಷಣ ಇಲಾಖೆ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದೆ.
ರಾಜ್ಯ ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ನಿಗದಿ ಮಾಡುವ ಅವಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ.
2023-24ನೆ ಸಾಲಿನ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ಖಾಸಗಿ ಶಾಲೆಗಳು ಶುಲ್ಕವನ್ನು ಶೇ.30-40ರಷ್ಟು ಹೆಚ್ಚಿಸಿವೆ. ಇದರಿಂದ, ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ವಿಚಾರಣೆಗೆ ಬಂದು ಶುಲ್ಕದ ಬಗ್ಗೆ ನಿರ್ಣಯವಾಗುವವರೆಗೂ ಪೋಷಕರು ಶಾಲೆಗಳಿಗೆ ಪ್ರವೇಶ ಮುಂದೂಡುವುದು ಸೂಕ್ತ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಕ್ಯಾಮ್ಸ್ ಸಭೆ: ‘ರಾಜ್ಯದಲ್ಲಿ 17,275 ಖಾಸಗಿ ಶಾಲೆಗಳಿದ್ದು, 6.18 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಈಗಾಗಲೇ ಶೇ.10-15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ತನ್ನ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಸೂಚಿಸಿದೆ. ಆದರೆ, ಇದನ್ನು ಶಾಲೆಗಳು ಪಾಲಿಸುತ್ತಿಲ್ಲ. ಇನ್ನು, ಪ್ರತಿಷ್ಠಿತ ಶಾಲೆಗಳಂತೂ ಮನಸೋಇಚ್ಛೆ ಶುಲ್ಕ ಪಡೆಯುತ್ತಿವೆ’. ಈ ಸಂಬಂಧ ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಸಂಘಟನೆಯು ಎ.6ಕ್ಕೆ ಖಾಸಗಿ ಶಾಲೆಗಳ ಸಭೆ ಕರೆದಿದೆ.