ಮುಸ್ಲಿಮರಲ್ಲಿ ಒಡಕು ಮೂಡಿಸಿದ ಆರೋಪ ಬೆಲ್ಲದ್ ಪಾಲಿಗೆ ಮುಳುವಾದೀತೇ?
ಎರಡು ಬಾರಿ ಗೆದ್ದಿರುವ ಬೆಲ್ಲದ್ ಮಣಿಸಲು ಹಠ ತೊಟ್ಟಿದೆಯೇ ಕಾಂಗ್ರೆಸ್? ಮುಸ್ಲಿಮರಲ್ಲಿ ಒಡಕು ಮೂಡಿಸಿದ ಆರೋಪ ಮುಳುವಾಗಲಿದೆಯೇ ಬಿಜೆಪಿಗೆ? ಅಭಿವೃದ್ಧಿ ಕಡೆಗಣನೆ ಬಗ್ಗೆ ಅಸಮಾಧಾನಗೊಂಡಿದ್ದಾರೆಯೇ ಮತದಾರರು? ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಲಾಬಲದ ಲೆಕ್ಕಾಚಾರಗಳೇನು?
ಅರವಿಂದ್ ಬೆಲ್ಲದ್
ಅರವಿಂದ ಬೆಲ್ಲದ್. ಉದ್ಯಮಿ ಹಾಗೂ ರಾಜಕಾರಣಿ. ಪ್ರಸಕ್ತ ಬಿಜೆಪಿ ನಾಯಕ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ. ಇಂಜಿನಿಯರಿಂಗ್ ಪದವೀಧರರು. ಈ ಭಾಗದ ಪ್ರಭಾವಿ ರಾಜಕಾರಣಿ ಚಂದ್ರಕಾಂತ ಬೆಲ್ಲದ್ ಅವರ ಪುತ್ರ. ಯಡಿಯೂರಪ್ಪ ರಾಜೀನಾಮೆ ನೀಡಿದ್ದ ವೇಳೆ ಸಿಎಂ ಹುದ್ದೆಗೂ ಇವರ ಹೆಸರು ಕೇಳಿಬಂದಿತ್ತು. ಈ ಸಲವೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರಾದರೂ, ಪಕ್ಷ ಇನ್ನೂ ಟಿಕೆಟ್ ಘೋಷಿಸಿಲ್ಲ.
ಸುಶಿಕ್ಷಿತ ಪ್ರಬುದ್ಧ ಮತದಾರರನ್ನು ಹೊಂದಿರುವ ಕ್ಷೇತ್ರ ಎಂದೇ ಹೆಸರಾಗಿದೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ. 1957ರಿಂದ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ ಗೆಲುವು ಕಂಡಿದೆ. ಜೆಎನ್‌ಪಿ ಒಮ್ಮೆ ಗೆದ್ದಿದೆ. ಚಂದ್ರಕಾಂತ್ ಬೆಲ್ಲದ್ ಪಕ್ಷೇತರ ಅಭ್ಯರ್ಥಿಯಾಗಿ ಒಮ್ಮೆ, ಬಳಿಕ ಬಿಜೆಪಿ ಸೇರ್ಪಡೆ ಬಳಿಕ ಎರಡು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಅವರ ರಾಜಕೀಯ ನಿವೃತ್ತಿ ಬಳಿಕ ಪುತ್ರ ಅರವಿಂದ್ ಬೆಲ್ಲದ್ ಈ ಕ್ಷೇತ್ರದಿಂದ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದು, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಲ್ಲದ್ ಹಿಡಿತ ಹೇಗಿದೆ?
2013ರಲ್ಲಿ ಈ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಅರವಿಂದ ಬೆಲ್ಲದ್, ಬಳಿಕ 2018ರ ಚುನಾವಣೆಯಲ್ಲೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಹಂಬಲ ಹೊಂದಿರುವ ಅರವಿಂದ ಬೆಲ್ಲದ್ ಅವರನ್ನೇ ಈ ಬಾರಿಯೂ ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತುಗಳಿವೆಯಾದರೂ, ಬಿಜೆಪಿಯಲ್ಲಿಯೇ ಅವರಿಗೆ ಪ್ರತಿಸ್ಪರ್ಧಿಗಳಿದ್ದಾರೆ ಎಂಬುದು ನಿಜ. ಕುಟುಂಬ ರಾಜಕಾರಣದ ವಿಚಾರ ಮುಂದೆ ಮಾಡಲಾಗಿದ್ದು, ಇತರರ ಸ್ಪರ್ಧೆಗೆ ಅವಕಾಶ ಕೊಡಬೇಕೆಂಬ ಒತ್ತಡಗಳೂ ಒಳಗೊಳಗೇ ಇವೆ ಎನ್ನಲಾಗಿದೆ.
ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಆಗಿ ಭರವಸೆ ಹುಟ್ಟಿಸಿರುವ, ಮಾತ್ರವಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರಮಾಪ್ತರಾದ ಈರೇಶ ಅಂಚಟಗೇರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೆಸರೂ ಇದೆ. 2013ರಲ್ಲಿ ಈ ಕ್ಷೇತ್ರದಿಂದ ಇವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಅಲ್ಲದೆ ಸಿಎಂ ಬೊಮ್ಮಾಯಿ ಆಪ್ತರಾಗಿರುವ ಕೆಎಸ್‌ಎಸ್‌ಐಡಿಸಿ ನಿರ್ದೇಶಕ, ಪಾಟೀಲ ಇಂಡಸ್ಟ್ರೀಸ್ ಸಿಇಒ ಎಸ್.ಸಿ.ಪಾಟೀಲ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.
ತೆರೆಮರೆಯಲ್ಲಿನ ಕಸರತ್ತಿನ ಬಳಿಕ ಅಂತಿಮವಾಗಿ ಬಿಜೆಪಿ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲದ ವಿಷಯ.
ಕಾಂಗ್ರೆಸ್ ಲೆಕ್ಕಾಚಾರಗಳೇನು?
ಕಾಂಗ್ರೆಸ್ ಇಲ್ಲಿ ಕಳೆದೆರಡು ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಿತ್ತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ತೀವ್ರ ಜಿದ್ದಾಜಿದ್ದಿನ ಹೋರಾಟ ನೀಡಿದ್ದಂತೂ ನಿಜ. ಹಲವು ಅಭಿವೃದ್ಧಿ ಕಾರ್ಯಗಳು, ಬಡವರಿಗೆ ಸೂರು ಮೊದಲಾದ ಯೋಜನೆಗಳ ಮೂಲಕ ಹೆಸರಾಗಿದ್ದ ಎಸ್.ಆರ್. ಮೋರೆ ನಿಧನದ ಬಳಿಕ ಕಾಂಗ್ರೆಸ್ ಇಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಎರಡು ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಹಿನ್ನಡೆ ಅನುಭವಿಸಿದ ಬಳಿಕ ಈ ಬಾರಿ ಹಿಂದುಳಿದವರು ಅಥವಾ ಬೇರೆ ಸಮುದಾಯಕ್ಕೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದೆ. ಕಳೆದ ಬಾರಿ ಕೈ ಹುರಿಯಾಳಾಗಿದ್ದ ಇಸ್ಮಾಯೀಲ್ ತಮಾಟಗಾರ ಈಗ ಗ್ರಾಮೀಣ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಲ್ಲಿ ಭರ್ಜರಿ 10 ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಯಾರಿಗೆ ಕೊಡಬೇಕು ಎಂದು ನಿರ್ಧರಿಸುವುದೇ ಕಷ್ಟವಾದಂತಿದೆ. 10 ಆಕಾಂಕ್ಷಿಗಳ ಪೈಕಿ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಫ್ಲೆಕ್ಸ್, ಬ್ಯಾನರ್ ಮೇಲಾಟ ನಡೆಸಿದ್ದಾರೆ. ಮಾತ್ರವಲ್ಲದೆ, ಆರೋಗ್ಯ ತಪಾಸಣೆ, ಪಾದಯಾತ್ರೆ, ಮುಷ್ಕರದಂಥ ಕಾರ್ಯಕ್ರಮಗಳಿಗೆ ಸಹಾಯಹಸ್ತ ನೀಡುತ್ತ ಜನಮನ ಗೆಲ್ಲುವ ಯತ್ನ ನಡೆಸಿದ್ದಾರೆ.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಕಾಂಗ್ರೆಸ್ ವಕ್ತಾರ ಪಿ.ಎಚ್. ನೀರಲಕೇರಿ, ಮಾಜಿ ಸಚಿವ ದಿ.ಎಸ್.ಆರ್. ಮೋರೆಯವರ ಪುತ್ರಿ ಕೀರ್ತಿ ಮೋರೆ, ರಾಣಿ ಚೆನ್ನಮ್ಮ ಬ್ಲಾಕ್ ಮಾಜಿ ಅಧ್ಯಕ್ಷ ಬಸವರಾಜ ಮಲಕಾರಿ, ಹಾಲಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷ ನಾಗರಾಜ ಗೌರಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಹಿರಿಯ ಮುಖಂಡ ಡಾ.ಶರಣಪ್ಪ ಮತ್ತಿಕಟ್ಟಿ, ಪಾಲಿಕೆ ಮಾಜಿ ಸದಸ್ಯ ಹಾಗೂ ಹುಬ್ಬಳ್ಳಿ ಅಂಜುಮನ್ ಉಪಾಧ್ಯಕ್ಷ ಅಲ್ತಾಫ್ ನವಾಝ್ ಕಿತ್ತೂರ, ಯುವ ಮುಖಂಡರಾದ ಆರ್.ಕೆ.ಪಾಟೀಲ, ರಫೀಕ್ ಸಾವಂತನವರ ಈಗಾಗಲೇ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ತಮ್ಮದೇ ಲೆಕ್ಕಾಚಾರ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಪ್ರಜಾಧ್ವನಿಯಲ್ಲೂ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ತಮ್ಮಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಗೆಲುವಿಗಾಗಿ ಒಂದಾಗಿ ಶ್ರಮಿಸುವ ಮಾತನ್ನೂ ಈ ಎಲ್ಲ ಆಕಾಂಕ್ಷಿಗಳೂ ಹೇಳಿದ್ದಾರೆ.
ಕಳೆದ ಪಾಲಿಕೆ ಚುನಾವಣೆಯಲ್ಲಿ ಈ ಕ್ಷೇತ್ರದ 25 ವಾರ್ಡ್‌ಗಳ ಪೈಕಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದಿದ್ದರೂ ಕಾಂಗ್ರೆಸ್ 10 ಸ್ಥಾನ ಗಳಿಸಿತ್ತು. ತಲಾ ಒಂದು ಸ್ಥಾನ ಜೆಡಿಎಸ್ ಮತ್ತು ಪಕ್ಷೇತರರ ಪಾಲಾಗಿತ್ತು. ಕಾಂಗ್ರೆಸ್ ಮತಗಳಿಕೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಹಿನ್ನೆಲೆ ಕೂಡ ಕೈ ಪಾಳೆಯದಲ್ಲಿ ಆಕಾಂಕ್ಷಿಗಳು ಹೆಚ್ಚಾಗಲು ಕಾರಣವೆನ್ನಲಾಗಿದೆ.
ಇತರ ಪಕ್ಷಗಳ ಪೈಪೋಟಿ
ಜೆಡಿಎಸ್‌ನಿಂದ ಗುರುರಾಜ ಹುಣಸಿಮರದ, ಆಮ್ ಆದ್ಮಿ ಪಕ್ಷದಿಂದ ಎಂ.ಅರವಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದಕ್ಕಿಂತ ಹೆಚ್ಚಾಗಿ, ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ.
ಬೆಲ್ಲದ್‌ಗೆ ಮುಳುವಾಗಲಿರುವುದೇನು?
ಬೆಲ್ಲದ್ ಪ್ರಗತಿಪರ ರಾಜಕಾರಣಿ ಎಂದು ಗುರುತಾದವರು. ಆದರೆ ಈಚಿನ ಅವರ ಕೆಲವು ರಾಜಕೀಯ ನಡೆಗಳು ಅವರಿಗೆ ಮುಳುವಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಖ್ಯವಾಗಿ ಮುಸ್ಲಿಮ್ ಸಮುದಾಯಕ್ಕಿದ್ದ 2ಬಿ ಮೀಸಲಾತಿ ರದ್ದುಗೊಳಿಸಬೇಕೆಂಬುದು ಅವರ ಪ್ರಬಲ ಆಗ್ರಹವಾಗಿತ್ತು ಎನ್ನಲಾಗುತ್ತಿದೆ. ಅಲ್ಲದೆ ಅಲ್ಪಸಂಖ್ಯಾತರಲ್ಲಿನ ಕಡಿಮೆ ಸಂಖ್ಯೆಯಲ್ಲಿರುವ ನದಾಫ್ ಮೊದಲಾದ ವರ್ಗಕ್ಕೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸುವಂಥ ಕ್ರಮಗಳ ಮೂಲಕ ಸಮುದಾಯದಲ್ಲಿಯೇ ಒಡಕು ಮೂಡಿಸುವ ಕೆಲಸ ಮಾಡಿದ್ದಾರೆಂಬ ಆರೋಪವೂ ಅವರ ಮೇಲಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲಿ ಆ್ಯಪ್ ಮೂಲಕ ಸರ್ವೇ ಮಾಡಿಸಲಾಯಿತೆಂಬ ಆರೋಪವೂ ಕೇಳಿಬಂದಿತ್ತು. ಅದಕ್ಕೆ ಬೆಲ್ಲದ್ ಸ್ಪಷ್ಟನೆಯನ್ನೂ ನೀಡಿ, ಸರ್ವೇ ಮಾಡಿಸಿದ್ದು ಯಾರೆಂದು ಗೊತ್ತಿಲ್ಲ ಎಂದಿದ್ದರು.
ಅಭಿವೃದ್ಧಿ ಕಡೆಗಣನೆಯ ಆರೋಪ
ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರ ಹಿಂದೆ ಬಿದ್ದಿದೆ ಎಂಬುದು ಮತ್ತೊಂದು ಬಹು ದೊಡ್ಡ ಆರೋಪ. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಲ್ಲದೆ, ಕೇಂದ್ರದ ಅನೇಕ ಯೋಜನೆಗಳನ್ನು ತಂದಿದ್ದಾರೆಂಬ ವಿಚಾರದಲ್ಲಿ ಬೆಲ್ಲದ್ ವಿರುದ್ಧ ಅಂಥ ಅಸಮಾಧಾನವಿಲ್ಲದಿದ್ದರೂ, ಧಾರವಾಡವನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಇದ್ದೇ ಇದೆ. ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಹುಟ್ಟಿಕೊಳ್ಳುವ ಮಟ್ಟಿಗೆ ಈ ಅಸಮಾಧಾನ ತೀವ್ರವಾಗಿದೆ. ಅಲ್ಲದೆ, ಈ ಸಮಿತಿ ಕೂಡ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದೆ.