ಫ್ಯಾಶಿಸ್ಟ್ ಮನಸ್ಥಿತಿಯ ಬಿಜೆಪಿ ಕಿತ್ತೆಸೆಯಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐನಿಂದ ಬೆಂಬಲ: ಬಿನೋಯ್ ವಿಶ್ವಮ್

ಕರ್ನಾಟಕ ವಿಧಾನಸಭಾ ಚುನಾವಣೆ

Update: 2023-04-10 15:39 GMT

ಬೆಂಗಳೂರು, ಎ.10: ಫ್ಯಾಶಿಸ್ಟ್ ಮನಸ್ಥಿತಿಯನ್ನು ಹೊಂದಿರುವ ಬಿಜೆಪಿಯನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೆಸೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಉಳಿದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಮ್ ಹೇಳಿದ್ದಾರೆ. 

ಸೋಮವಾರ ನಗರದ ಭಾರತ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಹಠಾವೋ, ದೇಶ್ ಬಚಾವೋ ಎಂಬ ಘೋಷಣೆಯನ್ನು ಪ್ರಚುರಪಡಿಸುವ ಅಭಿಪ್ರಾಯಕ್ಕೆ ಬರಲಾಗಿದೆ. ಹೀಗಾಗಿ, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯದಂತೆ ಮಾಡಬೇಕಿದೆ, ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಿಸಿದೆ ಎಂದು ಹೇಳಿದರು.

ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿಯಾಗಿರುವ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ಸಿಪಿಎಂನಿಂದ ಬಾಗೇಪಲ್ಲಿ ಅಭ್ಯರ್ಥಿಯಾಗಿರುವ ಡಾ.ಅನಿಲ್‍ಕುಮಾರ್ ಆವುಲಪ್ಪ ಅವರಿಗೆ ಸಿಪಿಐ ಬೆಂಬಲ ಘೋಷಿಸಿದೆ. ಅಲ್ಲದೆ, ಆಳಂದ, ಜೇವರ್ಗಿ, ಕೂಡ್ಲಿಗಿ, ಶಿರಾ, ಕೆಜಿಎಫ್, ಮೂಡಿಗೆರೆ, ಮಡಿಕೇರಿ ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವರಾಜ ರಾ. ಬಿರಾದಾರ, ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ಉಪಸ್ಥಿತರಿದ್ದರು. 
 

Similar News