ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ: ಸುದ್ದುಗುಂಟೆ ಪಾಳ್ಯ ಠಾಣೆಯ PSI ಅಮಾನತು
Update: 2023-04-12 14:25 GMT
ಬೆಂಗಳೂರು, ಎ.12: ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಗಂಭೀರ ಆರೋಪದ ಕೇಳಿಬಂದ ಬೆನ್ನಲ್ಲೇ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮಂಜುನಾಥ್ ಸ್ವಾಮಿ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಂತ್ರಸ್ತೆ ವರದಕ್ಷಿಣೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಹೇಳಿಕೆ ನೀಡಲು ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಗೆ ಹೋಗಿದ್ದರು. ಹೇಳಿಕೆ ಪಡೆಯುವಾಗ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ. ಮನೆಗೆ ಹೋದ ಮೇಲೆ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪಿಎಸ್ಸೈ ವಿರುದ್ಧ ಕಿಡಿಕಾರಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಡಿಸಿಪಿ ಯುವತಿಯನ್ನು ಕರೆಯಿಸಿಕೊಂಡು ಲಿಖಿತವಾಗಿ ದೂರು ಪಡೆದುಕೊಂಡು ಐಪಿಸಿ ಸೆಕ್ಷನ್ 354ಎ ಹಾಗೂ 354ಬಿ ಅಡಿ ಪ್ರಕರಣ ದಾಖಲಿಸಿಕೊಂಡು, ಪಿಎಸ್ಸೈ ಮಂಜುನಾಥ್ ಸ್ವಾಮಿ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.