ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ: ಸಿಎಂ ಬೊಮ್ಮಾಯಿ

Update: 2023-04-20 05:58 GMT

ಬೆಂಗಳೂರು, ಎ.20: ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದ್ದು, ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಲಿಂಗಾಯತ ನಾಯಕರ ಸಭೆ ನಡೆದ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಲಿಂಗಾಯತ ನಾಯಕರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ನವರ  ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು ಚರ್ಚಿಸಲಾಯಿತು. ಸಭೆಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಉಪಸ್ಥಿತರಿದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ. ಆದರೆ ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ  ನಿರ್ಣಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ಪ್ರಕ್ರಿಯೆ ನಂತರ ಪ್ರಚಾರಕ್ಕೆ ಪ್ರಧಾನಿ ಆಗಮನ

ನಾಮಪತ್ರ ಪ್ರಕ್ರಿಯೆ ಮುಗಿದ ನಂತರ  ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಕನಕಪುರದಲ್ಲಿ ಮಿಲಿಟರಿ ಹೊಟೇಲ್ ನಿಂದಲೇ ಪ್ರಚಾರ ಆರಂಭ

ಅಶೋಕ್ ಅವರಿಗೆ ಕನಕಪುರದಲ್ಲಿ ಮಿಲಿಟರಿ ಹೊಟೇಲ್ ಗೆ ಬಂದು ಹೋಗಿ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಮ್ಮ ಪ್ರಚಾರ ಮಿಲಿಟರಿ ಹೊಟೇಲಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ. ಅಂಥ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡುವುದಿಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ್ ತೆರಲಿದ್ದಾರೆ. ಇದರಲ್ಲಿ  ತಪ್ಪೇನಿದೆ. ಮಿಲಿಟರಿ ಹೊಟೇಲ್ ಗೆ ಯಾಕೆ ಹೋಗಬಾರದು ಎಂದು ಪ್ರಶ್ನಿಸಿದರು. 

ಪಕ್ಷದಿಂದ ವಲಸೆ ಹೋದವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದು, ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್ ವಿರುದ್ಧ ಸಿಎಂ ಕಿಡಿ

ಕಾಂಗ್ರೆಸ್ ನದ್ದು ಲಿಂಗಾಯತ ವಿರೋಧಿ ನಡೆ. 1967 ರಿಂದ ಈವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತರನ್ನು  ಕಾಂಗ್ರೆಸ್ ಸಿಎಂ ಮಾಡಿಲ್ಲ. ಮಧ್ಯೆ ವಿರೇಂದ್ರ ಪಾಟೀಲರು ಒಂಭತ್ತು ತಿಂಗಳು ಮುಖ್ಯಮಂತ್ರಿಯಾಗಿದ್ದರೂ  ವಪಾಟೀಲರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಮಾನ ನಿಲ್ದಾಣದಲ್ಲೇ  ಅವರನ್ನು ತೆಗೆದು ಹಾಕಲಾಗಿದೆ. ರಾಜಶೇಖರ ಮೂರ್ತಿಯವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ ಎಂದು ಆರೋಪಿಸಿದರು.

ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಮತಬ್ಯಾಂಕ್ ಗಾಗಿ ಧರ್ಮ ಒಡೆಯಲು ಹೋಗಿದ್ದನ್ನು

ಜನ‌  ಮರೆಯೋಲ್ಲ. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

Similar News