'ಸಿದ್ದರಾಮಯ್ಯ ತಲೆ ಕಡಿಯುತ್ತೇನೆ' ಎಂದವನಿಗೆ ಬಿಜೆಪಿ ಟಿಕೆಟ್: ಕುರುಬರ ಸಂಘ ಖಂಡನೆ

Update: 2023-04-20 12:27 GMT

ಬೆಂಗಳೂರು, ಎ.19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಕಡಿಯುತ್ತೇನೆ ಎಂದಿರುವ ವ್ಯಕ್ತಿಗೆ ಬಿಜೆಪಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದು ಖಂಡನೀಯವಾಗಿದ್ದು, ಕುರುಬರ ನಾಯಕತ್ವವನ್ನೂ ತುಳಿದವರು ತಮ್ಮ ಕರ್ಮಫಲವನ್ನು ಇಂದಲ್ಲ, ನಾಳೆ ಉಣ್ಣಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಹೇಳಿದ್ದಾರೆ.

ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷವೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊಲೆಗಡುಕ ಮಾತುಗಳನ್ನಾಡುವವರಿಗೆ ಟಿಕೆಟ್ ನೀಡಿದೆ. 2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆ ಕಡಿಯುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದವ. ಆತನಿಗೆ ಟಿಕೆಟ್ ನೀಡುವ ಮೂಲಕ ನಾಗಪುರದ ಮಂದಿ ಕುರುಬ ಸಮುದಾಯಕ್ಕೆ ಯಾವ ಸಂದೇಶ ನೀಡಿದ್ದಾರೆ ಎಂಬುದನ್ನು ಊಹಿಸದಷ್ಟು ಕುರುಬ ಸಮುದಾಯ ರಾಜಕೀಯ ಮೌಢ್ಯದಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.

ಬಿಜೆಪಿಯಲ್ಲಿರುವ ಲಿಂಗಾಯತ ನಾಯಕತ್ವವನ್ನು ತುಳಿದಂತೆ ಕುರುಬರ ನಾಯಕತ್ವವನ್ನೂ ತುಳಿದವರು ತಮ್ಮ ಕರ್ಮಫಲವನ್ನು ಇಂದಲ್ಲ, ನಾಳೆ ಉಣ್ಣಲಿದ್ದಾರೆ. ಶಾಖಾ ಸಖ್ಯ ಹೊಂದಿದ್ದ ಈಶ್ವರಪ್ಪಗೆ ಈ ಗತಿ ಬಂದರೆ ಇನ್ನು ಬೇರೆಯವರ ಕತೆ ಏನು ಎಂದು ಪ್ರಶ್ನಿಸಿದ ಅವರು, ನಾಲ್ಕು ದಶಕಗಳ ರಾಜಕೀಯ ಮಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಸಾಲದೆಂಬಂತೆ 2023ರ ಚುನಾವಣೆಯಲ್ಲೂ ಸ್ವಯಂ ನಿವೃತ್ತಿ ಘೋಷಿಸುವಂತೆ ಬಿಜೆಪಿ ಮಾಡಿದೆ. ಈಗ 5ನೆ ಪಟ್ಟಿಯಲ್ಲೂ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ತಪ್ಪಿಸಿ ಕೊಲೆಗಡುಕ ಮಾತುಗಳನ್ನಾಡುವವರಿಗೆ ಟಿಕೆಟ್ ನೀಡಿದೆ ಎಂದು ಟೀಕಿಸಿದರು.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸೈಕಲ್ ತುಳಿದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೂಡಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರು ಕಟ್ಟಿದ ಹುತ್ತದಲ್ಲಿ `ನಾಗಪುರದ ಹಾವುಗಳು’ ಸೇರಿಕೊಂಡು ಹುತ್ತವನ್ನೇ ಬೀಳಿಸುತ್ತಿವೆ. ರಾಜ್ಯದಲ್ಲಿ ಲಿಂಗಾಯತ ನಾಯಕತ್ವದ ಜತೆಗೆ, ಕುರುಬರ ನಾಯಕತ್ವವನ್ನು ಇಲ್ಲವಾಗಿಸುವ ಭಂಡತನಕ್ಕೆ ಮುಖ ತೋರಿಸದ ಎರಡು ಮುಖೇಡಿಗಳು ಹಿಂದಣ ಕೆಲಸ ಮಾಡುತ್ತಿವೆ. ಇಂತಹವರ ಬಗ್ಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜನತೆ ಮತ್ತು ಇಡೀ ಕರ್ನಾಟಕದ ಜನತೆ ಎಚ್ಚರಿಕೆ ವಹಿಸಿ ಈ ಸಲ ಬುದ್ಧಿ ಕಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Similar News