ರಮ್ಯಾರನ್ನು ಪಕ್ಷಕ್ಕೆ ಆಹ್ವಾನಿಸುವಷ್ಟು ಬಿಜೆಪಿ ಬರಗೆಟ್ಟಿಲ್ಲ: ಸಚಿವ ಆರ್. ಅಶೋಕ್
Update: 2023-04-23 06:31 GMT
ಬೆಂಗಳೂರು, ಎ.23: 'ನಟಿ ರಮ್ಯಾರನ್ನು ಪಕ್ಷಕ್ಕೆ ಆಹ್ವಾನಿಸುವಷ್ಟು ಬಿಜೆಪಿ ಬರಗೆಟ್ಟಿಲ್ಲ' ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬಿಜೆಪಿಯಿಂದ ಆಫರ್ ಬಂದಿತ್ತು ಎಂಬ ನಟಿ ರಮ್ಯಾ ಹೇಳಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ್, ಜಗದೀಶ್ ಶೆಟ್ಟರ್ ರಂಥ ಮಾಜಿ ಮುಖ್ಯಮಂತ್ರಿ, ಲಕ್ಷ್ಮಣ ಸವದಿಯಂಥ ಮಾಜಿ ಉಪಮುಖ್ಯಂತ್ರಿಗಳಿಗೇ ನಾವು ಟಿಕೆಟ್ ಕೊಟ್ಟಿಲ್ಲ. ಇನ್ನು ರಮ್ಯಾಗೆ ಸೀಟ್ ಕೊಡುವ ಪ್ರಶ್ನೆ ಎಲ್ಲಿಂದ ಬರುತ್ತೆ? ಎಂದು ಹೇಳಿದರು.
''ರಮ್ಯಾ ಅವರು ಚಿತ್ರರಂಗದಲ್ಲಿದ್ದಾರೆ. ಅಲ್ಲೇ ಇರಲಿ. ಅವರು ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಸಂಚಾಲಕರಾಗಿದ್ದರು. ಹಾಗಾಗಿ ಕಾಂಗ್ರೆಸ್‌ಗೆ ಅನುಕೂಲವಾಗಲಿ ಅಂತಾ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ನಮ್ಮಪಕ್ಷಕ್ಕೆ ಅವರ ಅಗತ್ಯವೇ ಇಲ್ಲ'' ಎಂದು ತಿಳಿಸಿದರು.
'ಇಂಡಿಯಾ ಟುಡೆ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಮ್ಯಾ, 'ಬಿಜೆಪಿಯಿಂದಲೂ ಆಫರ್ ಬಂದಿತ್ತು, ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ದರು' ಎಂದು ಹೇಳಿದ್ದಾರೆ.