ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಸೋಲಿಸುವಂತೆ ದೇವನೂರು ಮಹಾದೇವ ಕರೆ

Update: 2023-04-25 15:55 GMT

ಬೆಂಗಳೂರು, ಎ.25: ಸಂಘಪರಿವಾರದ ಅಜೆಂಡಾಗಳನ್ನೇ ಜಾರಿ ಮಾಡುತ್ತಿರುವ ಹಾಗೂ ಕೋಮುವಾದಿ ಬಿಜೆಪಿ ಪಕ್ಷವನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿದೆ ಎಂದು ಸಾಹಿತಿ ದೇವನೂರು ಮಹಾದೇವ ಕರೆ ನೀಡಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್ ಆವರಣದಲ್ಲಿ 'ಎದ್ದೇಳು ಕರ್ನಾಟಕ' ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಮರುಹುಟ್ಟು ಪಡೆದಂತೆ ಕಾಣಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿದೆ ಎಂದರು.

ಕಾಂಗ್ರೆಸ್ ಮೂರನೆ ಸ್ಥಾನದಲ್ಲಿ ಇರುವ ಕ್ಷೇತ್ರಗಳಲ್ಲಿ ಅಂದರೆ ಜೆಡಿಎಸ್ ಎಲ್ಲೆಲ್ಲಿ ಬಿಜೆಪಿಯ ನೇರ ಸ್ಪರ್ಧಿಯಾಗಿರುವುದು ಖಚಿತವೋ ಅಲ್ಲಿ ಜೆಡಿಎಸ್‍ಗೆ ಮತ ನೀಡಬೇಕು. ಆ ಮೂಲಕ ಬಿಜೆಪಿಯನ್ನು ಸೋಲಿಸಬೇಕು ಎಂದು ಅವರು ಹೇಳಿದರು.

ಹಿಂದಿನ ಯಾವ ಚುನಾವಣೆಯಲ್ಲೂ ಕಂಡಿರದಷ್ಟು ಜಾಗೃತ ಪ್ರಜ್ಞೆಯನ್ನು ಇಂದು ಮತದಾರರಲ್ಲಿ ಕಾಣುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ.  ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ, ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ ಎಂದು ದೇವನೂರು ಮಹಾದೇವ ನೆನೆಪಿಸಿಕೊಂಡರು.

ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿ ಪಕ್ಷವೇ ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೇ? ಡಬಲ್ ಎಂಜಿನ್ ಸರಕಾರವು ಆಡಳಿತ ನಡೆಸುತ್ತಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿತ್ತು. ಬಿಜೆಪಿಯ ಈ ಡಬಲ್ ಎಂಜಿನ್ ಸರಕಾರ 20 ಕೆ.ಜಿ ಕೊಡಬೇಕಲ್ಲವೇ ಎಂದು ಮತದಾರರು ಮಾಧ್ಯಮಗಳ ಮೂಲಕ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಗ್ಯಾಸ್ ಬರುವುದಕ್ಕೂ ಮೊದಲು ನಾವು ಸೌದೆ ತಂದು ಅಡುಗೆ ಮಾಡಿಕೊಳ್ಳುತ್ತಿದ್ದೆವು. ಆಗ ಹೊಗೆ ಬರುವ ಕಾರಣ ಕಣ್ಣಲ್ಲಿ ನೀರು ಬರುತ್ತಿತ್ತು. ಈಗ ಗ್ಯಾಸ್ ಬೆಲೆ ಏರಿಕೆಯಾಗಿ ಕಣ್ಣಲ್ಲಿ ರಕ್ತ ಬರುತ್ತಿದೆ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಇಂತಹ ಕರುಳ ನುಡಿಗಳು ಕರ್ನಾಟಕದ ಉದ್ದಗಲಕ್ಕೂ ಆಕ್ರಂದನ ಮಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಡಬಲ್ ಎಂಜಿನ್ ಸರಕಾರವು ಬೆಲೆ ಏರಿಕೆಯಲ್ಲಿ, ನಿರುದ್ಯೋಗದ ಏರಿಕೆಯಲಿ,್ಲ ಬಡತನದ ಏರಿಕೆಯಲ್ಲಿ, ಬಡವ-ಬಲ್ಲಿದರ ನಡುವೆ ಅಂತರ ಏರಿಕೆಯಲ್ಲಿ ಅಭಿವೃದ್ಧಿ ಸಾಧಿಸಿದೆ. ಬಿಜೆಪಿ ಜನಪ್ರತಿನಿಧಿಗಳು ಕಾಂಗ್ರೆಸ್ ಏನು ಮಾಡಿದೆ ಎಂದು ಲೇವಡಿ ಮಾಡುತ್ತಾರೆ. ಕಾಂಗ್ರೆಸ್ ಮಾಡಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿ, ಸಂಪತ್ತನ್ನು ತನ್ನ ಆಪ್ತರಿಗೆ, ಖಾಸಗಿಯವರಿಗೆ ಮಾರಿಕೊಂಡು ಈ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇತ್ತೀಚೆಗೆ, ವರುಣಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಒಂದಿಷ್ಟು ತರುಣರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಬಿಜೆಪಿಯವರು ನಮ್ಮ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳಿತ್ತಿರಬೇಕಾದರೆ, ನಾವು ನಿಮಗೆ ಏಕೆ ಮತ ಹಾಕಬೇಕು ಎಂದು ಯುವಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡದೇ ಸಂಸದರ ಬಾಯಿ ಬಂದ್ ಆಗಿತ್ತು ಎಂದು ದೇವನೂರು ಮಹಾದೇವ ಹೇಳಿದರು.

ನಮ್ಮ ಸಂವಿಧಾನ ಬದಲಾವಣೆ ಮಾಡಿ ಅವರ ‘ಮನುಧರ್ಮಶಾಸ್ತ್ರ’ ಮತ್ತೆ ತರಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಹಾಗಾದರೆ ಶೂದ್ರರು ಅಂದರೆ ಒಕ್ಕಲಿಗರು, ಲಿಂಗಾಯತರು ಮತ್ತೆ ಅವರಿಗೆ ಸೇವಕರಾಗಬೇಕೇ? ತಳಸಮುದಾಯಗಳು ಮತ್ತೆ ಕಾಲಾಳುಗಳಾಗಬೇಕೇ? ಈಗೀಗ ಊರೊಳಕ್ಕೆ ಬರುತ್ತಿರುವ ಅಸ್ಪೃಶ್ಯರು ಮತ್ತೆ ಊರಾಚೆಗೆ ಜೀವನ ಮಾಡಬೇಕೇ? ಹಳ್ಳಿ ಮಕ್ಕಳ ಸ್ಕಾಲರ್‍ಶಿಪ್ ಕಿತ್ತುಕೊಳ್ಳುವ ಬಿಜೆಪಿ ಸರಕಾರದ ಉದ್ದೇಶವಾದರೂ ಏನು ಎಂದು ಮತದಾರರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಅವರು ವಿವರಿಸಿದರು.

ನಮ್ಮ ಅಕೌಂಟಿಗೆ 15 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ, ಅಕೌಂಟ್‍ಗೆ ಹಣ ಹಾಕಿ ಎಂದು ಜನರು ಬಿಜೆಪಿ ಅಭ್ಯರ್ಥಿಗಳಿಗೆ ಕೇಳುತಿರುವ ಘಟನೆ ವರದಿಯಾಗುತ್ತಿದೆ. ಹಾಗೆಯೇ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಎಷ್ಟು, ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಎಷ್ಟು ಎಂದು ಪ್ರಶ್ನಿಸುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ಅವರಿಗೆ ಈ ಪ್ರಶ್ನೆ ಕೇಳಿದರೆ ಅವರು ಮುಗುಳ್ನಗೆಯಲ್ಲೆ ಕೊಲ್ಲುತ್ತಾರೆ ಎಂದು ದೇವನೂರು ಮಹಾದೇವ ದೂರಿದರು.

ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ, ಈ ಸುಲಿಗೆ ಸರಕಾರ ಮೊದಲು ಸೋಲಬೇಕು. ಆ ಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ ಎಂದು ಎದ್ದೇಳು ಕರ್ನಾಟಕದ ಆಶಯವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಪಕ್ಷವು ಡಬಲ್ ಇಂಜಿನ್ ಸರಕಾರ ಅಧಿಕಾರ ನಡೆಸುತ್ತಿದೆ ಎಂದು ಪ್ರಚಾರ ನಡೆಸುತ್ತಿದೆ. ಒಂದು ಎಂಜಿನ್‍ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಎಂಜಿನ್ ಸುಲಿಗೆ ಮಾಡುತ್ತಿದೆ. ಎರಡು ಎಂಜಿನ್‍ಗಳು ಜೋರಾಗಿ ಸದ್ದು ಮಾಡುತ್ತಿವೆ. ಆದರೆ ಚಲಿಸುತ್ತಲೇ ಇಲ್ಲ. ಹಾಗಾಗಿ ಈ ಡಬಲ್ ಎಂಜಿನ್ ಸಂಘಪರಿವಾರದ ಸರಕಾರವನ್ನು ಗುಜರಿಗೆ ಹಾಕಬೇಕಾಗಿದೆ.

ದೇವನೂರು ಮಹಾದೇವ, ಸಾಹಿತಿ

Similar News