ಬೆಂಗಳೂರು | ನೀರು ತುಂಬುವ ವಿಚಾರಕ್ಕೆ ಗಲಾಟೆ: ಮನನೊಂದು ಗೃಹಣಿ ಆತ್ಮಹತ್ಯೆ
ಬೆಂಗಳೂರು, ಎ.26: ನೀರು ತುಂಬುವ ವಿಚಾರಕ್ಕೆ ಆರಂಭವಾದ ಗಲಾಟೆ ಗೃಹಿಣಿಯೊಬ್ಬರ ಸಾವಿಗೆ ಕಾರಣವಾದ ಘಟನೆ ಇಲ್ಲಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎ.21ರಂದು ಕೋಗಿಲು ಮುಖ್ಯರಸ್ತೆಯ ಸರ್ಕಾರಿ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ಸರಸ್ವತಿ (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರಸ್ವತಿ ಹಾಗೂ ಆಕೆಯ ಪತಿ ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ನಾಗರಾಜ್ ಸಿನೆಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್ ಹಾಗೂ ಭವಾನಿ ಎಂಬ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್ ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿ ಪ್ರಶ್ನಿಸಿದಾಗ, ಮನ ಬಂದಂತೆ ಬೈದಿದ್ದಾರೆ. ಇದರಿಂದ ಮನನೊಂದು ಸರಸ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಸಾವಿಗೆ ಕಾರಣವಾದ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾಳ ವಿರುದ್ಧ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.